ಅಮೆರಿಕದಲ್ಲಿ ಶೂಟೌಟ್: 12 ಮಂದಿ ಬಲಿ

ವಾಷಿಂಗ್ಟನ್: ಅಮೆರಿಕದಲ್ಲಿ ಬಂದೂಕು ಹಿಂಸಾಚಾರ ಸಾಂಕ್ರಾಮಿಕವಾಗುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಬೆನ್ನಲ್ಲೇ ವಾರಾಂತ್ಯದಲ್ಲಿ ಅಮೆರಿಕದ ವಿವಿಧೆಡೆ ನಡೆದ ಶೂಟೌಟ್ ಪ್ರಕರಣಗಳಲ್ಲಿ 12 ಮಂದಿ ಮೃತಪಟ್ಟು ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ.
ನ್ಯೂಜೆರ್ಸಿ, ದಕ್ಷಿಣ ಕರೊಲಿನಾ, ಜಾರ್ಜಿಯಾ, ಓಹಿಯೊ ಮತ್ತು ಮಿನ್ನೆಸ್ಟಾದಲ್ಲಿ ಶೂಟಿಂಗ್ನಿಂದ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯೂಜೆರ್ಸಿಯ ಕಮಡೆನ್ನಲ್ಲಿ ಮೋಜಿನ ಪಾರ್ಟಿಯಲ್ಲಿ ಗುಂಡು ಹಾರಿಸಿದಾಗ ಇಬ್ಬರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕರೊಲಿನಾದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 14 ವರ್ಷದ ಬಾಲಕಿ ಮೃತಪಟ್ಟು ಇತರ 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಜಿಯಾದ ಅಟ್ಲಾಂಟಾದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋದಾಗ ಮೂವರ ಶವ ಪತ್ತೆಯಾಗಿದೆ ಎಂದು ಅಟ್ಲಾಂಟಾ ಪೊಲೀಸರು ಹೇಳಿದ್ದಾರೆ. ಓಹಿಯೋದ ಯಂಗ್ಸ್ಟೌನ್ನಲ್ಲಿ ಬಾರೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಕೊಲಂಬಸ್ ಪಾರ್ಕ್ನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ 16 ವರ್ಷದ ಬಾಲಕಿ ಮೃತಪಟ್ಟಿದ್ದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಕಳೆದ ವರ್ಷ ಪೊಲೀಸ್ ಅಧಿಕಾರಿಯ ದೌರ್ಜನ್ಯದಿಂದ ಹತ್ಯೆಯಾದ ಜಾರ್ಜ್ ಫ್ಲಾಯ್ಡಾ ಅವರ ಪ್ರಥಮ ಪುಣ್ಯತಿಥಿ ಅಂಗವಾಗಿ ಬೆಂಬಲಿಗರು ಮತ್ತು ಸಂಬಂಧಿಕರು ನಡೆಸಿದ ಪಾದಯಾತ್ರೆ ವೇಳೆಯೂ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.