ಕೊಲೆ ಪ್ರಕರಣ ಆರೋಪಿ ಸುಶೀಲ್ ಕುಮಾರ್ ರೈಲ್ವೇ ನೌಕರಿಯಿಂದ ಅಮಾನತು

ಹೊಸದಿಲ್ಲಿ, ಮೇ 24: ದೇಶದ ಅಗ್ರಗಣ್ಯ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದ ಸುಶೀಲ್ ಕುಮಾರ್ ಗೆ ಮತ್ತೊಂದು ಹಿನ್ನಡೆಯಾಗಿದೆ. ದಿಲ್ಲಿಯಲ್ಲಿ ಮತ್ತೊಬ್ಬ ಕುಸ್ತಿಪಟುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಸುಶೀಲ್ ಕುಮಾರ್ರನ್ನು ಮುಂದಿನ ಆದೇಶದವರೆಗೆ ನೌಕರಿಯಿಂದ ರೈಲ್ವೇ ಇಲಾಖೆ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
26 ವರ್ಷದ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸುಶೀಲ್ ಕುಮಾರ್ ಮತ್ತು ಆತನ ಸಹಚರ ಅಜಯ್ ಕುಮಾರ್ನನ್ನು 6 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸುಮಾರು 15 ದಿನದಿಂದ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ನನ್ನು ರವಿವಾರ ದಿಲ್ಲಿಯ ಮುಂಡ್ಕಾ ಎಂಬಲ್ಲಿ ಪೊಲೀಸರು ಬಂಧಿಸಿದ್ದರು.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿರುವ ಸುಶೀಲ್ ಕುಮಾರ್ ಉತ್ತರ ರೈಲ್ವೇಯಲ್ಲಿ ಸೀನಿಯರ್ ಕಮರ್ಷಿಯಲ್ ಮ್ಯಾನೇಜರ್ ಆಗಿದ್ದರು. ಶಾಲಾ ಮಟ್ಟದಲ್ಲಿ ಕುಸ್ತಿ ಕ್ರೀಡೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸುಶೀಲ್ ಕುಮಾರ್ ನನ್ನು ದಿಲ್ಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ದಿಲ್ಲಿ ಸರಕಾರ ನಿಯೋಜಿಸಿದೆ.
ಸುಶೀಲ್ ಕುಮಾರ್ ಪೊಲೀಸ್ ಕಸ್ಟಡಿಯಲ್ಲಿ 48 ಗಂಟೆ ಕಳೆದಿರುವುದರಿಂದ ರೈಲ್ವೇ ಇಲಾಖೆಯ ನಿಯಮದನ್ವಯ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಉತ್ತರ ರೈಲ್ವೇಯ ಪ್ರಕಟಣೆ ತಿಳಿಸಿದೆ. ಈ ಮಧ್ಯೆ, ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸುಶೀಲ್ ಕುಮಾರ್ ಅವರ ನಿಯೋಜನೆಯನ್ನು ವಿಸ್ತರಿಸಲು ದಿಲ್ಲಿ ಸರಕಾರ ನಿರಾಕರಿಸಿದೆ.
ಬುಧವಾರ ಸುಶೀಲ್ ಕುಮಾರ್ ನನ್ನು ದಿಲ್ಲಿ ಪೊಲೀಸ್ ಕ್ರೈಂಬ್ರಾಂಚ್ ವಿಭಾಗ ಛತ್ರಸಾಲ್ ಕ್ರೀಡಾಂಗಣಕ್ಕೆ ಮತ್ತು ಮೋಡೆಲ್ ಟೌನ್ನಲ್ಲಿರುವ ನಿವಾಸಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು ಸುಶೀಲ್ಗೆ ಗ್ಯಾಂಗ್ ಸ್ಟರ್ ಗಳೊಂದಿಗೆ ಸಂಪರ್ಕವಿತ್ತೇ ಎಂಬ ಬಗ್ಗೆಯೂ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ಬಗ್ಗೆ ಅಪಹಾಸ್ಯ ಮಾಡಿದ್ದ ಸಾಗರ್ ರಾಣಾನನ್ನು ಮಾಡೆಲ್ ಟೌನ್ ನಿವಾಸದಿಂದ ಅಪಹರಿಸಿ ಛತ್ರಸಾಲ್ ಕ್ರೀಡಾಂಗಣಕ್ಕೆ ಕರೆದೊಯ್ದಿದ್ದ ಸುಶೀಲ್ ಕುಮಾರ್ ಹಾಗೂ ಸಹಚರರು, ಅಲ್ಲಿ ಇತರ ಕುಸ್ತಿಪಟುಗಳ ಎದುರು ರಾಣಾನಿಗೆ ಬುದ್ಧಿಕಲಿಸಬೇಕೆಂದು ಥಳಿಸಿದ್ದರು. ಘಟನೆಯನ್ನು ವೀಡಿಯೊ ಚಿತ್ರೀಕರಣ ನಡೆಸಿ ಇತರರಿಗೆ ಶೇರ್ ಮಾಡಿದರೆ ತನ್ನ ವಿರುದ್ಧ ಮಾತನಾಡಲು ಯಾರಿಗೂ ಧೈರ್ಯ ಬಾರದು ಎಂಬುದು ಸುಶೀಲ್
ಲೆಕ್ಕಾಚಾರವಾಗಿತ್ತು. ಆದರೆ ವೈರಲ್ ಆಗಿರುವ ಈ ವೀಡಿಯೊ ಈಗ ಪ್ರಮುಖ ಪುರಾವೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಕೊಲೆಗೂ ತನಗೂ ಯಾವುದೇ ಸಂಬಂಧವಿಲ್ಲ. ಪೈಲ್ವಾನರ ಎರಡು ಗುಂಪಿನ ನಡುವೆ ಉಂಟಾದ ಜಗಳವನ್ನು ಬಿಡಿಸಲು ತಾನು ಮುಂದಾಗಿದ್ದೆ ಎಂದು ರವಿವಾರ ಸುಶೀಲ್ ಕುಮಾರ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.