ಪಿಎಂ ಕೇರ್ಸ್ ಅಡಿಯಲ್ಲಿ ಪೂರೈಸಲಾದ 150 ವೆಂಟಿಲೇಟರ್ ಗಳಲ್ಲಿ 113 ದೋಷಪೂರಿತ
ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿದ ಬಾಂಬೆ ಹೈಕೋರ್ಟ್

ಮುಂಬೈ, ಮೇ 25: ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಕೇಂದ್ರ ಸರಕಾರ ಪೂರೈಸಿದ 150 ವೆಂಟಿಲೇಟರ್ಗಳಲ್ಲಿ ಕನಿಷ್ಠ 113 ವೆಂಟಿಲೇಟರ್ಗಳು ದೋಷಪೂರಿತವಾಗಿವೆ ಎಂದು ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠ ಮಂಗಳವಾರ ದಾಖಲಿಸಿಕೊಂಡಿದೆ. ಕಳಪೆ ಗುಣಮಟ್ಟದ ವೆಂಟಿಲೇಟರ್ಗಳನ್ನು ಪೂರೈಸಿರುವ ಬಗ್ಗೆ ಸರಕಾರ ಅರಿತುಕೊಳ್ಳಲಿ ಹಾಗೂ ಅದಕ್ಕೆ ಬದಲಿಯಾಗಿ ಉತ್ತಮ ಗುಣಮಟ್ಟದ ವೆಂಟಿಲೇಟರ್ಗಳನ್ನು ನೀಡಲಿ ಎಂದು ನ್ಯಾಯಾಲಯ ಹೇಳಿದೆ.
ಪಿಎಂ ಕೇರ್ಸ್ ನಿಧಿಯನ್ನು ವೆಂಟಿಲೇಟರ್ ಪೂರೈಸಲು ಬಳಸುವುದಿದ್ದರೆ, ವೈದ್ಯಕೀಯ ಬಳಕೆಗೆ ಅರ್ಹವಾದ ವೆಂಟಿಲೇಟರ್ಗಳನ್ನು ಪೂರೈಸಬೇಕು. ವೈದ್ಯಕೀಯ ಬಳಕೆಗೆ ಅರ್ಹವಲ್ಲದೆ ಇದ್ದರೆ, ಅದು ಕೇವಲ ಪೆಟ್ಟಿಗೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಮಹಾರಾಷ್ಟ್ರದ ಮರಾಠವಾಡ ವಲಯದಲ್ಲಿ ಕೊರೋನ ಬಿಕ್ಕಟ್ಟು ನಿರ್ವಹಣೆಯ ಕುರಿತ ಸ್ವಯಂಪ್ರೇರಿತ ಕ್ರಿಮಿನಲ್ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಹಾಗೂ ಡಿ.ಯು. ಬೇದಬ್ವಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪಿಎಂ ಕೇರ್ಸ್ ನಿಧಿಯ ಮೂಲಕ ನಿಷ್ಕ್ರಿಯ ವೆಂಟಿಲೇಟರ್ಗಳನ್ನು ಪೂರೈಸಿರುವುದು ಸ್ವಲ್ಪ ಗಂಭೀರ ವಿಚಾರ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ವೆಂಟಿಲೇಟರ್ಗಳು ಜೀವರಕ್ಷಕ ಸಲಕರಣೆಗಳು ಎಂದು ನಾವು ಭಾವಿಸಿದ್ದೇವೆ. ವೆಂಟಿಲೇಟರ್ಗಳು ಕಾರ್ಯ ನಿರ್ವಹಿಸದೇ ಇದ್ದರೆ, ರೋಗಿಗಳ ಜೀವ ಅಪಾಯದಲ್ಲಿ ಸಿಲುಕಬಹುದು ಎಂದು ಹೈಕೋರ್ಟ್ ಹೇಳಿದೆ.
ಒಂದು ವೇಳೆ ವೆಂಟಿಲೇಟರ್ಗಳು ದೋಷಪೂರಿತ ಎಂದು ಪತ್ತೆಯಾದರೆ ಸರಿಪಡಿಸುವ ಕುರಿತ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಜಯ್ ದಿ ತಲ್ಹಾರ್ ಅವರಿಗೆ ಸೂಚಿಸಿತು. ಪಿಎಂ ಕೇರ್ಸ್ ಉಪಕ್ರಮದ ಅಡಿಯಲ್ಲಿ ಪೂರೈಸಲಾದ ವೆಂಟಿಲೇಟರ್ಗಳನ್ನು ಆಸ್ಪತ್ರೆಗಳು ತಿರಸ್ಕರಿಸಿವೆ ಎಂದು ಔರಂಗಾಬಾದ್ನ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ತಿಳಿಸಿದ ಬಳಿಕ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.