ಕೊರೋನ ಭೀತಿ ಆಧಾರದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 25: ಕೊರೋನ ಸೋಂಕು ತಗುಲುವ ಭೀತಿಯ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದ್ದು, ಈ ಆಧಾರದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನಿಗೆ ತಡೆ ನೀಡಿದೆ.
ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಇತರ ನ್ಯಾಯಾಲಯಗಳು ಪೂರ್ವನಿದರ್ಶನವಾಗಿ ಬಳಸಬಾರದು. ಆಯಾ ಪ್ರಕರಣಗಳ ಮಹತ್ವದ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೋವಿಡ್ ಪ್ರಕರಣ ಉಲ್ಬಣಗೊಂಡಿರುವುದರಿಂದ ಜೈಲಿನಲ್ಲಿ ದಟ್ಟಣೆ ಹೆಚ್ಚಿದೆ. ಆದ್ದರಿಂದ ಕೊರೋನ ಸೋಂಕು ಹರಡುವ ಭೀತಿ ಇರುವುದರಿಂದ ಖೈದಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಬಹುದು ಎಂದು ಕಳೆದ ವಾರ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉತ್ತರಪ್ರದೇಶ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
ಜೈಲಿನಲ್ಲಿ ಕೊರೋನ ಸೋಂಕು ಹರಡುವ ಭೀತಿ ಇರುವುದರಿಂದ 130 ಪ್ರಕರಣ ದಾಖಲಾಗಿರುವ ಪ್ರತೀಕ್ ಜೈನ್ ಎಂಬಾತನನ್ನು ನಿರೀಕ್ಷಣಾ ಜಾಮೀನು ನೀಡಿ 2022ರ ಜನವರಿವರೆಗೆ ಬಿಡುಗಡೆಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಸೂಚಿಸಿತ್ತು. ಕೊರೋನ ಸೋಂಕು ಹರಡುವ ಭೀತಿಯ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸುವುದು ತಪ್ಪು ಪೂರ್ವನಿದರ್ಶನಕ್ಕೆ ಕಾರಣವಾಗಬಹುದು ಎಂದು ಉತ್ತರಪ್ರದೇಶ ಸರಕಾರ ಹೇಳಿತ್ತು.
ದೇಶದಲ್ಲಿರುವ ಬಂಧೀಖಾನೆಗಳಲ್ಲಿ ದಟ್ಟಣೆಯಿರುವುದರಿಂದ ಕೊರೋನ ಸೋಂಕು ಹರಡಬಹುದು. ಆದ್ದರಿಂದ ದಟ್ಟಣೆ ಕಡಿಮೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ಸಲಹೆ ನೀಡಿತ್ತು. ಈ ಸಲಹೆಯನ್ನು ತನ್ನ ಆದೇಶದಲ್ಲಿ ಅಲಹಾಬಾದ್ ಹೈಕೋರ್ಟ್ ಉಲ್ಲೇಖಿಸಿದೆ. ಕೊರೋನ ಸೋಂಕು ಉಲ್ಬಣಿಸಿದ ಸಂದರ್ಭದಲ್ಲೂ ಖೈದಿಗಳನ್ನು ದಟ್ಟಣೆಯಲ್ಲಿ ಜೀವಿಸಲು ಬಿಟ್ಟರೆ ಅವರ ವಿರುದ್ಧದ ಪ್ರಕರಣ ವಿಚಾರಣೆಗೆ ಬರುವ ಮುನ್ನವೇ ಅವರು ಮೃತಪಡಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.