ನರೇಂದ್ರ ಮೋದಿ ಸರಕಾರದ 7 ವರ್ಷಗಳು-ಒಂದು ಸಮೀಕ್ಷೆ
ದೇಶದ ಪ್ರಜಾತಾಂತ್ರಿಕ ವೌಲ್ಯಗಳು
ಭಾಗ-1
ಮೇ 2014ರ ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಮೊದಲ ಬಾರಿ ಪ್ರವೇಶಿಸುವಾಗ ನರೇಂದ್ರ ಮೋದಿ ಪ್ರಜಾತಂತ್ರದ ದೇಗುಲವೆನಿಸಿದ ಸಂಸತ್ ಭವನದ ಮೆಟ್ಟಲುಗಳಿಗೆ ತಲೆಬಾಗಿ ವಂದಿಸಿದರು; ಪ್ರಧಾನಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಬಳಿಕ ತಾನು ರಾಷ್ಟ್ರದ ‘ಪ್ರಧಾನ ಸೇವಕ’ ಎಂದು ಘೋಷಿಸಿದರು. ಬಹುತೇಕ ರಾಜಕೀಯ ಧುರೀಣರ ನಡವಳಿಕೆಗಿಂತ ಭಿನ್ನವಾದ ಅವರ ಈ ವರ್ತನೆಯನ್ನು ಅನೇಕರು ಮೆಚ್ಚಿದರು. ಪ್ರಧಾನಿಯಾಗಿ ಎರಡು ವರ್ಷಗಳ ಬಳಿಕ ಜೂನ್ 2016ರಲ್ಲಿ ಅಮೆರಿಕದ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುವಾಗಲೂ ಮೋದಿ ಹೀಗೆ ಹೇಳಿದ್ದರು: ‘ನನ್ನ ಸರಕಾರಕ್ಕೆ ಭಾರತದ ಸಂವಿಧಾನವೇ ನಿಜವಾದ ಪವಿತ್ರ ಗ್ರಂಥ. ಆ ಗ್ರಂಥದಲ್ಲಿ ಧಾರ್ಮಿಕ ಮತ್ತು ಅಭಿಪ್ರಾಯ ಸ್ವಾತಂತ್ರ, ಮತದಾನ ಮತ್ತು ಸಮಾನತೆಯ ಹಕ್ಕುಗು ಎಲ್ಲರಿಗೂ ಮೂಲಭೂತವಾಗಿ ಲಭ್ಯ’.
ಮುಂದಿನ ಏಳು ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ನರೇಂದ್ರ ಮೋದಿ ಈ ಘೋಷಣೆಗಳಿಗೆ ಬದ್ಧರಾಗಿ ಉಳಿದರು?
► ಪ್ರಜಾತಂತ್ರದ ಮೂಲ ವ್ಯವಸ್ಥೆ
ಈ ಪ್ರಶ್ನೆಗೆ ಉತ್ತರಿಸುವ ಮೊದಲು ಭಾರತದ ಪ್ರಜಾತಂತ್ರದ ಮೂಲಭೂತ ವ್ಯವಸ್ಥೆಯ ಸ್ಥೂಲವಾದ ಚಿತ್ರವನ್ನು ಕಲ್ಪಿಸಿಕೊಳ್ಳಬೇಕು. ನಮ್ಮ ಸಂವಿಧಾನದ ಪ್ರಕಾರ ದೇಶದ ಆಡಳಿತಕ್ಕೆ ಸಂಬಂಧಿಸಿದಂತೆ ಶಾಸಕಾಂಗ (ಸಂಸತ್ತು), ಕಾರ್ಯಾಂಗ (ರಾಷ್ಟ್ರಪತಿ ಮತ್ತು ಮಂತ್ರಿಮಂಡಲವನ್ನೊಳಗೊಂಡ ಸರಕಾರ) ಮತ್ತು ನ್ಯಾಯಾಂಗ (ಸುಪ್ರೀಂ ಕೋರ್ಟು) ಎಂಬ ಮೂರು ಪ್ರಮುಖ ಅಂಗಗಳಿವೆ. ಭಾರತವು ಹಲವು ರಾಜ್ಯಗಳ ಒಕ್ಕೂಟ ಅಥವಾ ಸಂಘವಾದುದರಿಂದ ರಾಜ್ಯಗಳಲ್ಲಿಯೂ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿವೆ. ಈ ಮೂರು ಅಂಗಗಳು ಸ್ವತಂತ್ರವಾದರೂ ಪರಸ್ಪರ ಸಹಕಾರ ಮತ್ತು ಗೌರವದಿಂದ ಕಾರ್ಯ ನಿರ್ವಹಿಸಬೇಕು. ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸುವಾಗ ಕಾರ್ಯಾಂಗವು ಸಂವಿಧಾನದ ನಿಯಮಗಳನ್ನು ಮತ್ತು ಸಂಪ್ರದಾಯಗಳನ್ನು ಪರಿಪಾಲಿಸಬೇಕು
ದೇಶದ ವೈವಿಧ್ಯಗಳನ್ನು ಗಮನದಲ್ಲಿರಿಸಿ ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸಂವಿಧಾನದಲ್ಲಿ ವಿಕೇಂದ್ರೀಕರಿಸಿ ಅದರ 7ನೇ ಅನುಚ್ಛೇದದಲ್ಲಿ ಮೂರು ಪಟ್ಟಿಗಳಲ್ಲಿ ಕೊಡಲಾಗಿದೆ. ದೇಶದ ರಕ್ಷಣೆ, ವಿದೇಶ ನೀತಿ, ಅರ್ಥವ್ಯವಸ್ಥೆ ಮುಂತಾದ ವಿಷಯಗಳು ಕೇಂದ್ರದ ಪಟ್ಟಿಯಲ್ಲಿ ಹಾಗೂ ಕಾನೂನು ಸುವ್ಯವಸ್ಥೆ, ಕೃಷಿ, ಆರೋಗ್ಯ ಮುಂತಾದ ವಿಷಯಗಳು ರಾಜ್ಯಗಳ ಪಟ್ಟಿಯಲ್ಲಿ ಬರುತ್ತವೆ. ಕೇಂದ್ರದ ವಿಷಯಗಳಲ್ಲಿ ರಾಜ್ಯಗಳೂ, ರಾಜ್ಯಗಳ ವಿಷಯಗಳಲ್ಲಿ ಕೇಂದ್ರವೂ ಕೈಹಾಕುವುದು ಒಕ್ಕೂಟದ ಆಶಯಕ್ಕೆ ವಿರುದ್ಧವಾಗುತ್ತದೆ.
ಹೊಸ ಕಾನೂನುಗಳನ್ನು ಮಾಡಬೇಕಿದ್ದರೆ ಸಂಸತ್ತಿನ ಪೂರ್ವಾನುಮೋದನೆ ಅಗತ್ಯ. ಈ ಪ್ರಕ್ರಿಯೆಯು ಸಂವಿಧಾನದಲ್ಲಿ ರೂಪಿಸಿದ ವಿಧಾನದಲ್ಲಿಯೇ ನಡೆಯಬೇಕು. ತುರ್ತು ಸಂದರ್ಭಗಳಲ್ಲಿ ಹೊಸ ಶಾಸನವನ್ನು ರಾಷ್ಟ್ರಪತಿಯ ‘ಸುಗ್ರೀವಾಜ್ಞೆ’ಯ ರೂಪದಲ್ಲಿ ಅನುಷ್ಠಾನಕ್ಕೆ ತರಬಹುದು; ಆದರೆ ಸುಗ್ರೀವಾಜ್ಞೆಗೆ ಸಂಸತ್ತಿನ ಒಪ್ಪಿಗೆ ಅಗತ್ಯ. ಅದನ್ನು ಪಡೆಯುವ ಜವಾಬ್ದಾರಿ ಸಚಿವ ಸಂಪುಟದ್ದು.
ಪ್ರಧಾನ ಮಂತ್ರಿ ಮಂತ್ರಿಮಂಡಲದ ಮುಖ್ಯಸ್ಥರಾದರೂ ‘ಸಮಾನರಲ್ಲಿ ಮೊದಲನೆಯವರು’; ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಸಚಿವ ಸಂಪುಟದಲ್ಲಿ ಚರ್ಚಿಸಬೇಕು. ಆ ನಿರ್ಧಾರಗಳಿಗೆ ಇಡೀ ಸಚಿವ ಸಂಪುಟವು ಸಾಮೂಹಿಕವಾಗಿ ಬಾಧ್ಯವಾಗುತ್ತದೆ.
ಸಂಸದೀಯ ಪ್ರಜಾತಂತ್ರದಲ್ಲಿ ಪ್ರಧಾನ ಮಂತ್ರಿ ಮತ್ತು ಸಚಿವ ಸಂಪುಟವು ಸಂಸತ್ತಿಗೆ ಉತ್ತರದಾಯಿಯಾಗಿರುತ್ತದೆ. ಈ ಕಾರಣಕ್ಕೋಸ್ಕರವೇ ಕಾಲಕಾಲಕ್ಕೆ ಸಂಸತ್ತಿನ ಅಧಿವೇಶನಗಳನ್ನು ಏರ್ಪಡಿಸಿ ದೇಶದ ಆಗುಹೋಗುಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಬೇಕು; ಕಾರ್ಯಸೂಚಿಯಲ್ಲಿ ನಿಗದಿತವಾದ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ತಾವು ಪ್ರತಿನಿಧಿಸುತ್ತಿರುವ ಮತದಾರರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ವಿಚಾರ ಮಂಡಿಸಲು ಅವಕಾಶಗಳನ್ನು ಒದಗಿಸಬೇಕು. ಕಾರ್ಯಾಂಗಕ್ಕೆ ಇನ್ನೊಂದು ಜವಾಬ್ದಾರಿಯೂ ಇದೆ. ಸಂವಿಧಾನದ ಮೂಲಕ ತಮ್ಮ ಅಧಿಕಾರವನ್ನು ಪಡೆಯುವ ಸಂಸ್ಥೆಗಳಾದ ಉಚ್ಚನ್ಯಾಯಾಲಯಗಳು, ಚುನಾವಣಾ ಆಯೋಗ, ಕಂಟ್ರೋಲರ್ ಆ್ಯಂಡ್ ಅಡಿಟರ್ ಜನರಲ್- ಸಿಎಜಿ (ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕರು), ಮಾಹಿತಿ ಆಯೋಗ ಮುಂತಾದವುಗಳು ತಮ್ಮ-ತಮ್ಮ ಕಾರ್ಯಗಳನ್ನು ಸುಸೂತ್ರವಾಗಿ ನಿಭಾಯಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಕಾರ್ಯಾಂಗ ಒದಗಿಸಿಕೊಡಬೇಕು. ಆ ಸಂಸ್ಥೆಗಳ ಮುಖ್ಯಸ್ಥರನ್ನು ಮತ್ತು ಇತರ ಸದಸ್ಯರನ್ನು ಸಂವಿಧಾನದ ನೀತಿಗಳಂತೆ ನೇಮಕಾತಿ ವಾಡಲು ಅನುಕೂಲ ಮಾಡಿಕೊಡಬೇಕು.
ನರೇಂದ್ರ ಮೋದಿ ಸರಕಾರ ತನ್ನ ಸಾಂವಿಧಾನಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಹೇಗೆ ನಿರ್ವಹಿಸಿತು? ಕಳೆದ ಏಳು ವರ್ಷಗಳಲ್ಲಿ ಈ ಸರಕಾರ ಕೈಗೊಂಡ ಪ್ರಮುಖ ನಿರ್ಧಾರಗಳು, ಶಾಸಕಾಂಗ, ನ್ಯಾಯಾಂಗ ಮತ್ತು ಸಾಂವಿಧಾನಿಕ ಸಂಸ್ಥೆಗಳ ಕುರಿತಾದ ಅದರ ಧೋರಣೆಗಳು ಮತ್ತು ಕೇಂದ್ರ ಸಚಿವರ ವರ್ತನೆಗಳನ್ನು ಪರಿಶೀಲಿಸಿದಾಗ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ.
► ಸಂಸತ್ತು ಮತ್ತು ಮೋದಿ
ಸಂಸತ್ತಿನಲ್ಲಿ ಮಸೂದೆಗಳ ಮಂಡನೆಯ ಬಳಿಕ ಸಂಸದೀಯ ಸಮಿತಿಗಳಿಂದ ಅವುಗಳ ಪರಾಮರ್ಶೆ ಅನೇಕ ದಶಕಗಳಿಂದ ನಡೆದು ಬಂದ ಸಂಪ್ರದಾಯ. ಕೆಲವೊಂದು ಮಸೂದೆಗಳಿಗೆ ವಿವಿಧ ಸ್ತರದ ಸಮಾಲೋಚನೆ ಅಗತ್ಯ, ಅದಕ್ಕೆ ವಿಷಯಜ್ಞಾನವೂ ಸಾಕಷ್ಟಿರಬೇಕು. ಸಂಸತ್ತಿನ ವಿಭಿನ್ನ ಒತ್ತಡಗಳ ನಡುವೆ ಮಸೂದೆಗಳ ಕಡೆ ಅಗತ್ಯವಾದ ಗಮನ ಬಾರದೆ ಹೋಗಬಹುದು. ಸಂಸತ್ತಿನ ಸಮಿತಿಯಲ್ಲಿ ಎಲ್ಲಾ ಪಕ್ಷದ ಪ್ರತಿನಿಧಿಗಳು ನೇಮಕವಾಗಿರುತ್ತಾರೆ, ಮಾತ್ರವಲ್ಲ ಆ ಸಮಿತಿಗೆ ಸಾರ್ವಜನಿಕರಿಂದ ಮತ್ತು ತಜ್ಞರಿಂದ ಅಹವಾಲು ಅಥವಾ ಮನವಿ ಸ್ವೀಕರಿಸುವ ಅಧಿಕಾರವಿದೆ. ಈ ವಿಧಾನವನ್ನು ಅನುಸರಿಸಿ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಚರ್ಚೆಗಳು ಅರ್ಥಪೂರ್ಣವಾಗಿ, ಕಣ್ತಪ್ಪಿ ಅಥವಾ ಅಜ್ಞಾನದಿಂದ ಆಗಿರಬಹುದಾದ ತಪ್ಪುಗಳು ಸಮಿತಿಯ ಪರಾಮರ್ಶೆಯ ಮೂಲಕ ಸರಿಪಡಿಸಲ್ಪಡುತ್ತವೆ.
ಯುಪಿಎ ಸರಕಾರದ 10 ವರ್ಷಗಳ ಕಾಲದಲ್ಲಿ ಶೇಕಡಾ 65 ರಿಂದ 70ರಷ್ಟು ಮಸೂದೆಗಳು ಸಂಸದೀಯ ಸಮಿತಿಗಳ ಪರಾಮರ್ಶೆಯ ಬಳಿಕ ಸಂಸತ್ತಿನಲ್ಲಿ ಚರ್ಚಿತವಾಗುತ್ತಿದ್ದವು. ಮೋದಿ ಸರಕಾರ ಬಂದ ಮೇಲೆ ಆ ಪ್ರಮಾಣ ಶೇಕಡಾ 20ಕ್ಕೆ ಅಥವಾ ಅದಕ್ಕಿಂತಲೂ ಕೆಳಗೆ ಕುಸಿದಿದೆ. ಸಂಸತ್ತಿನಲ್ಲಿಯೂ ಮಸೂದೆಗಳ ವಿಸ್ತೃತ ಚರ್ಚೆಗಳಾಗುವುದಿಲ್ಲ.
ಮಸೂದೆಗಳು ಕಾನೂನುಗಳಾಗಲು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಅಂಗೀಕಾರವಾಗಬೇಕು. ಆದರೆ ಹಣಕಾಸಿಗೆ ಸಂಬಂಧಿಸಿದ ಮಸೂದೆಗಳನ್ನು ರಾಜ್ಯಸಭೆ ಅಂಗೀಕರಿಸುವ ಅಗತ್ಯವಿಲ್ಲ. ಚರ್ಚೆಯ ಬಳಿಕ ರಾಜ್ಯಸಭೆ ಸಲಹೆಗಳನ್ನು ಕೊಡಬಹುದು - ಆದರೆ, ಆ ಸಲಹೆಗಳನ್ನು ಲೋಕಸಭೆ ಒಪ್ಪಬೇಕೆಂದಿಲ್ಲ. ಲೋಕಸಭೆಯು ಮಂಜೂರು ಮಾಡಿದ ಮಸೂದೆಯು ರಾಷ್ಟ್ರಪತಿಯವರ ಅಂಗೀಕಾರದ ಬಳಿಕ ಕಾನೂನಾಗುತ್ತದೆ. 2014-2019ರ ತನಕ ಮೋದಿ ಸರಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿರಲಿಲ್ಲ: ಲೋಕಸಭೆಯಲ್ಲಿ ಮಂಜೂರಾದ ಮಸೂದೆಗಳು ರಾಜ್ಯಸಭೆಯಲ್ಲಿ ಬೆಂಬಲವಿಲ್ಲದೆ ಬಿದ್ದುಹೋಗಬಹುದಾದ ಸಾಧ್ಯತೆಗಳಿದ್ದವು. ಇದನ್ನು ತಪ್ಪಿಸಲು ಮೋದಿ ಸರಕಾರ ಹೊಸತೊಂದು ದಾರಿಯನ್ನು ಅನುಸರಿಸಿತು. ಒಂದು ಮಸೂದೆಯನ್ನು ಹಣಕಾಸಿಗೆ ಸಂಬಂಧಿಸಿದ ಮಸೂದೆ ಎಂದು ಪ್ರಸ್ತಾವಿಸಿ ರಾಜ್ಯಸಭೆಯ ಅಂಗೀಕಾರದ ಅಗತ್ಯವನ್ನೇ ನಿವಾರಿಸುವ ಕ್ರಮಕ್ಕೆ ಮುಂದಾಯಿತು. ಇದಕ್ಕೆ ಪ್ರಮುಖವಾದ ಉದಾಹರಣೆಯೆಂದರೆ, ಆಧಾರ ಕಾರ್ಡಿಗೆ ಸಂಬಂಧಿಸಿದ ಮಸೂದೆ. ಅದಕ್ಕೆ ನೇರ ನಗದು ವರ್ಗಾವಣೆಯ ಮಸೂದೆ ಎಂಬ ಹೆಸರನ್ನಿತ್ತು, ಆಧಾರ ಕಾರ್ಡಿಗೆ ಸಂಬಂಧಪಟ್ಟ ಅನೇಕ ಕಾಲಂಗಳನ್ನು ಅದಕ್ಕೆ ಸೇರಿಸಿ, ಲೋಕಸಭೆಯ ಅಂಗೀಕಾರದ ಮೂಲಕ ಮಸೂದೆಯನ್ನು ಅನುಷ್ಠಾನಗೊಳಿಸಿತು.
ಇಡೀ ದೇಶದ ಮೇಲೆ ಪ್ರಭಾವ ಬೀರಬಹುದಾದ ಹೊಸ ಕಾಯ್ದೆಗಳನ್ನು ಮಂಡಿಸುವಾಗ ಸರಕಾರವು ಆತುರವನ್ನು ತೋರಿಸಿದರೆ ಸಂಶಯಕ್ಕೆ ಆಸ್ಪದವಾಗುತ್ತದೆ. 2020ರಲ್ಲಿ ಕೊರೋನದ ದೇಶವ್ಯಾಪಿ ಸಂಕಟದ ಪರಿಸ್ಥಿತಿಯಲ್ಲಿ ಮೋದಿ ಸರಕಾರವು ರೈತರಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಅನುಷ್ಠಾನ ಮಾಡಿದ ಕ್ರಮ ಇದಕ್ಕೊಂದು ನಿದರ್ಶನ. ಮೊದಲಾಗಿ, ಕೃಷಿಗೆ ಸಂಬಂಧಿತ ಶಾಸನಗಳನ್ನು ಮಾಡುವ ಅಧಿಕಾರವಿರುವುದು ರಾಜ್ಯಗಳ ಶಾಸನ ಸಭೆಗಳಿಗೆ. ಹೀಗಿದ್ದರೂ ಮೋದಿ ಸರಕಾರವು ಸುಗ್ರೀವಾಜ್ಞೆಯ ದಾರಿ ಹಿಡಿದು ಮುನ್ನಡೆಯಿತು. ಆ ಬಳಿಕ, ಅವುಗಳನ್ನು ಸಂಸತ್ತಿನಲ್ಲಿ ಮಂಡಿಸಿ, ಮುಕ್ತ ಚರ್ಚೆಗೆ ಅವಕಾಶ ನೀಡದೆ ಆತುರದಿಂದ ಅಂಗೀಕಾರ ಪಡೆಯಿತು. ರಾಜ್ಯಸಭೆಯಲ್ಲಿ ಮಸೂದೆಗಳ ಮೇಲೆ ಮತದಾನವಾಗಬೇಕೆಂಬ ಸದಸ್ಯರ ಬೇಡಿಕೆಯನ್ನು ಕಡೆಗಣಿಸಿ ಧ್ವನಿಮತದ ಮೂಲಕ ಅಂಗೀಕೃತವಾಗಿದೆ ಎಂದು ಘೋಷಿಸಲಾಯಿತು. ಈ ಕ್ರಮಗಳು ಸಂವಿಧಾನದ ಕಟ್ಟುಪಾಡುಗಳನ್ನು ಮೀರಿದ್ದಾಗಿವೆ.
ಇಡೀ ದೇಶವನ್ನು ತಲ್ಲಣಗೊಳಿಸುವ ಅವ್ಯವಹಾರಗಳಾದಾಗ ಸತ್ಯವನ್ನು ತಿಳಿಯಲು ಸಂಸದೀಯ ತನಿಖಾ ಸಮಿತಿಯನ್ನು ನೇಮಿಸುವ ಪದ್ಧತಿ ಎಲ್ಲಾ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಇದೆ. ಭಾರತದಲ್ಲಿ ಈ ಹಿಂದೆ ಬೋಫೋರ್ಸ್ ಗನ್ಗಳ ಖರೀದಿ ಹಗರಣ ಮತ್ತು ಹರ್ಷದ್ ಮೆಹ್ತಾ ಪ್ರೇರಿತ ಬ್ಯಾಂಕು ಅವ್ಯವಹಾರಗಳ ಬಗ್ಗೆ ಸಂಸದೀಯ ಸಮಿತಿಗಳು ತನಿಖೆ ನಡೆಸಿದ್ದವು. ಮೋದಿ ಸರಕಾರವು ಮಾಡಿದ ರಫೇಲ್ ಯುದ್ಧವಿಮಾನಗಳ ಖರೀದಿಯ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತಿದ ರಾಜಕೀಯ ಪಕ್ಷಗಳು ಸಂಸದೀಯ ಸಮಿತಿಯ ನೇಮಕಾತಿಯ ಬೇಡಿಕೆಯನ್ನು ಮಂಡಿಸಿದವು. ಸರಕಾರವು ಅದನ್ನು ತಿರಸ್ಕರಿಸಿ ಉತ್ತಮವಾದ ಒಂದು ಸಂಸದೀಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿತು.
ಸಂಸತ್ತಿನ ಅಧಿವೇಶನಗಳಾಗುತ್ತಿದ್ದಾಗ ಪ್ರಧಾನ ಮಂತ್ರಿ ಮೋದಿಯವರು ಸಭೆಯಲ್ಲಿ ಭಾಗವಹಿಸುತ್ತಿದ್ದ ಸಂದರ್ಭಗಳು ಬಹಳ ವಿರಳ. ಉದಾಹರಣೆಗೆ, 2019ರ ಇಡೀ ವರ್ಷದಲ್ಲಿ ಅವರು ಲೋಕಸಭೆಯಲ್ಲಿ 14 ಗಂಟೆ ಮತ್ತು ರಾಜ್ಯಸಭೆಯಲ್ಲಿ 10 ಗಂಟೆ ಕಾಲ ಮಾತ್ರ ಭಾಗವಹಿಸಿದ್ದರು. ಅವರ ಮೇಲೆ ನೇರ ಆಪಾದನೆಗಳಿದ್ದರೂ, ರಫೇಲ್ ಯುದ್ಧವಿಮಾನದ ಖರೀದಿಗೆ ಸಂಬಂಧಿಸಿದ ‘ಅವ್ಯವಹಾರ’ದ ಚರ್ಚೆಗೆ ಪ್ರತಿಕ್ರಿಯೆ ನೀಡಲು ಅವರು ಮುಂದೆ ಬರಲಿಲ್ಲ. ಮಾತ್ರವಲ್ಲ, ರಕ್ಷಣಾ ವಿಭಾಗದ ವಿಷಯಗಳ ಪಶ್ನೆಗಳಿಗೆ ಉತ್ತರಿಸಲು ಆಗಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸದನದಲ್ಲಿದ್ದರೂ, ಹಣಕಾಸು ಮಂತ್ರಿ ಅರುಣ್ ಜೈಟ್ಲಿಗೆ ಮೋದಿಯವರು ಜವಾಬ್ದಾರಿ ನೀಡಿದ್ದರು.
ದೇಶದಲ್ಲಿ ಭೀಕರವಾದ ಪ್ರಕೃತಿಯ ವಿಕೋಪ, ಭಯೋತ್ಪಾದಕರ ಅಟ್ಟಹಾಸ, ತೀವ್ರ ಆರ್ಥಿಕ ಬಿಕ್ಕಟ್ಟು, ದೇಶವನ್ನು ಘಾತಿಸುವ ಸಾರ್ವಜನಿಕ ಆರೋಗ್ಯ ಸಮಸ್ಯೆ ಉಂಟಾದಾಗ ರಾಷ್ಟ್ರದ ನಾಯಕನ ನೆಲೆಯಲ್ಲಿ ಪ್ರಧಾನ ಮಂತ್ರಿ ಅವುಗಳ ಬಗ್ಗೆ ಅಧಿಕೃತವಾದ ಹೇಳಿಕೆಯನ್ನು ಸಂಸತ್ತಿಗೆ ನೀಡಿ ದೇಶದ ಮುಂದಿನ ಸವಾಲುಗಳನ್ನು ಸರಕಾರ ಹೇಗೆ ನಿಭಾಯಿಸಲು ಯೋಚಿಸಿದೆ ಎಂಬುದಾಗಿ ತಿಳಿಸಬೇಕು. ಅದು ಪ್ರಜಾತಂತ್ರದ ಒಂದು ಅರ್ಥಪೂರ್ಣ ಸಂಪ್ರದಾಯ. ಆದರೆ, ಹೋದ ಏಳು ವರ್ಷಗಳಲ್ಲಿ ಸಂಸತ್ತನ್ನು ಉದ್ದೇಶಿಸಿ ನರೇಂದ್ರ ಮೋದಿ ಇಂತಹ ಬೆಳವಣಿಗೆಗಳ ಬಗೆಗೆ ಮಾತನಾಡಿದ್ದೇ ಅಪರೂಪ. ದೇಶದ ಹಿಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ತಮ್ಮ ಪುಸ್ತಕದಲ್ಲಿ ಮೋದಿಯವರು ಸಂಸತ್ತನ್ನು ಈ ರೀತಿ ನಿರ್ಲಕ್ಷಿಸುವ ಬಗ್ಗೆ ಉಲ್ಲೇಖಿಸಿದ್ದಾರೆ.
ಪ್ರಜಾತಂತ್ರ ಪದ್ಧತಿಗೆ ವಿರುದ್ಧವಾದ ಇನ್ನೊಂದು ಬೆಳವಣಿಗೆ ಅಂದರೆ ಎಲ್ಲಾ ಅಧಿಕಾರವೂ ಪ್ರಧಾನಮಂತ್ರಿಯ ಕಚೇರಿಯಲ್ಲಿಯೇ ಕೇಂದ್ರೀಕೃತವಾಗಿರುವುದು. ನೋಟು ರದ್ದತಿ, ಕಾಶ್ಮೀರದ ಸ್ಥಾನಮಾನದ ಬದಲಾವಣೆ ಮತ್ತು ಕೋವಿಡ್ ಸಾಂಕ್ರಾಮಿಕದ ಪರಿಹಾರದ ಕುರಿತಾದ ನಿರ್ಧಾರಗಳು ಪ್ರಧಾನಿಯವರ ಕಚೇರಿಯಿಂದಲೇ ಹೊರಬಂದವೆಂದು ಅನೇಕ ವರದಿಗಳು ಬಂದಿವೆ. ಸಂಪುಟದ ಎಲ್ಲ ಮಂತ್ರಿಗಳು ತಾತ್ವಿಕವಾಗಿ ಸಮಾನರು, ಆದರೆ ಅನೇಕ ಮಂತ್ರಿಗಳ ಹೆಸರೇ ಕೇಳಿಬರುತ್ತಿಲ್ಲ. ರೈತರ ಪ್ರತಿಭಟನೆ ತೀವ್ರವಾಗಿರುವಾಗ ಭಾರತದ ಕೃಷಿ ಮಂತ್ರಿ ಯಾರೆಂಬ ಪ್ರಶ್ನೆ ಕೇಳಿ ಬರುತ್ತಿತ್ತು. ಪ್ರತಿಯೊಬ್ಬ ಮಂತ್ರಿಯೂ ಮಾಡುತ್ತಿರುವ ಒಂದು ಕೆಲಸವೆಂದರೆ ಪ್ರಧಾನಿಯವರನ್ನು ಸಂಸತ್ತಿನಲ್ಲಿಯೂ ಅದರ ಹೊರಗೂ ತಮ್ಮ ಹೇಳಿಕೆಗಳ ಮೂಲಕ ರಕ್ಷಿಸುವುದು.
ಈ ಎಲ್ಲಾ ವಿದ್ಯಮಾನಗಳು ನರೇಂದ್ರ ಮೋದಿಯವರಿಗೆ ಸಂಸದೀಯ ವ್ಯವಸ್ಥೆಯ ಮೇಲೆ ಇರುವ ದೃಷ್ಟಿಕೋನಕ್ಕೆ ಕನ್ನಡಿ ಹಿಡಿಯುತ್ತವೆ.
(ಮುಂದುವರಿಯುವುದು)