ಲಕ್ಷದ್ವೀಪ ಆಡಳಿತಾಧಿಕಾರಿಯ ವಿವಾದಾತ್ಮಕ ನಿಯಮಾವಳಿ ವಿರೋಧಿಸಿ 8 ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ

ಸಾಂದರ್ಭಿಕ ಚಿತ್ರ
ತಿರುವನಂತಪುರ: ಕೇಂದ್ರಾಡಳಿತ ಪ್ರದೇಶದ ಸಂಸ್ಕೃತಿ ಹಾಗೂ ಶಾಂತಿಯನ್ನು ಹಾಳು ಮಾಡುತ್ತದೆ ಎಂಬ ಭೀತಿಯಲ್ಲಿ ಲಕ್ಷ ದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಹೊಸ ನಿಯಮಾವಳಿಗಳನ್ನು ವಿರೋಧಿಸಿ ಲಕ್ಷದ್ವೀಪ ಬಿಜೆಪಿ ಘಟಕದ ಕನಿಷ್ಠ ಎಂಟು ಮಂದಿ ಪದಾಧಿಕಾರಿಗಳು ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಆಡಳಿತದ ಜನ ವಿರೋಧಿ ಚಟುವಟಿಕೆಗಳನ್ನು ಬಹಿರಂಗಪಡಿಸಲು ಸ್ಥಳೀಯ ಘಟಕ ನಡೆಸಿದ ಪ್ರಯತ್ನಕ್ಕೆ ಕೇಂದ್ರ ಸರಕಾರದಿಂದ ಯಾವುದೇ ಉತ್ತರ ಪಡೆಯದ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಕ್ಷದ್ವೀಪದ ಉಸ್ತುವಾರಿ ವಹಿಸಿರುವ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಹಾಗೂ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ ಕೇರಳದ ಬಿಜೆಪಿ ಮುಖಂಡರಿಗೆ ಪದಾಧಿಕಾರಿಗಳ ರಾಜೀನಾಮೆ ದೊಡ್ಡ ಹಿನ್ನಡೆಯಾಗಿದೆ. ತಮ್ಮ ಪಟ್ಟಭದ್ರ ಕಾರ್ಯಸೂಚಿಯನ್ನು ಪೂರೈಸುವುದಕ್ಕಾಗಿ ಕೇರಳದ ಮುಸ್ಲಿಂ ಸಂಘಟನೆಗಳು ಹಾಗೂ ಎಡಪಕ್ಷಗಳು ಲಕ್ಷ ದ್ವೀಪದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿವೆ ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ.
ನರೇಂದ್ರ ಮೋದಿಯವರ ಅಭಿವೃದ್ಧಿ ಕನಸನ್ನು ಲಕ್ಷದ್ವೀಪದಲ್ಲಿ ಜಾರಿಗೆ ತರಲು ಆಡಳಿತಾಧಿಕಾರಿ ಪಟೇಲ್ ಪ್ರಯತ್ನಿಸುತ್ತಿದ್ದಾರೆ ಎಂದು ಅಬ್ದುಲ್ಲಕುಟ್ಟಿ ಹೇಳಿದ್ದಾರೆ.
ಮಾಜಿ ರಾಜ್ಯ ಉಪಾಧ್ಯಕ್ಷ ಎಂ.ಸಿ. ಮುತ್ತುಕೋಯಾ, ಖಜಾಂಚಿ ಬಿ. ಶುಕೂರ್ ಹಾಗೂ ಬಿಜೆವೈಎಂ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಶಿಮ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.