ಜಾರ್ಖಂಡ್, ಛತ್ತೀಸ್ ಗಢದ ನಂತರ ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿ ಫೋಟೊ ಕೈಬಿಟ್ಟ ಪಂಜಾಬ್

ಚಂಡಿಗಡ: ಜಾರ್ಖಂಡ್ ಹಾಗೂ ಛತ್ತೀಸ್ ಗಢದ ನಂತರ 18ರಿಂದ 44 ವರೆಗಿನ ವಯೋಮಾನದವರಿಗೆ ಡಿಜಿಟಲ್ ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಪಂಜಾಬ್ ರಾಜ್ಯ ಸರಕಾರ ಕೂಡ ಕೈಬಿಟ್ಟಿದೆ.
ಪಂಜಾಬ್‌ನಲ್ಲಿ, 18-44 ವಯೋಮಾನದ ಕಟ್ಟಡ ನಿರ್ಮಾಣ ಕಾರ್ಮಿಕರು, ಅಸ್ವಸ್ಥತೆ ಹೊಂದಿರುವ ಜನರು ಹಾಗೂ ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಕುಟುಂಬ ಸದಸ್ಯರಿಗೆ ಲಸಿಕೆ ಪಡೆಯಲು ಆದ್ಯತೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಂಡವರು ಕೇಂದ್ರದ ಕೋವಿನ್ ಅಪ್ಲಿಕೇಶನ್ ಬದಲಿಗೆ ಪಂಜಾಬ್‌ನ ಕೋವಾ ಅಪ್ಲಿಕೇಶನ್‌ನಿಂದ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ. ಈ ಎಲ್ಲ ಪ್ರಮಾಣಪತ್ರದಲ್ಲಿ ಮೋದಿಯವರ ಚಿತ್ರವಿಲ್ಲ.
ನಾವು ಪ್ರಧಾನಮಂತ್ರಿಯ ಚಿತ್ರವನ್ನು ತೆಗೆದುಹಾಕಿಲ್ಲ, ಆದರೆ ಕೋವಾ ಅಪ್ಲಿಕೇಶನ್‌ನಿಂದ ನೀಡಲಾಗುವ ಪ್ರಮಾಣಪತ್ರಕ್ಕೆ ಅವರ ಫೋಟೊವನ್ನು ಸೇರಿಸಿಲ್ಲ ಎಂದು ಪಂಜಾಬ್ ಸರಕಾರದ ಅಧಿಕಾರಿಯೊಬ್ಬರು ಹೇಳಿದರು.
ಪಂಜಾಬ್‌ನ ಲಸಿಕೆಯ ಪ್ರಮಾಣಪತ್ರದಲ್ಲಿ ಮೋದಿಯ ಚಿತ್ರ ಇಲ್ಲ. ಪ್ರಧಾನಿ ಫೋಟೊ ಬದಲಿಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಚಿತ್ರವೂ ಇಲ್ಲ ಎಂದು ಅಧಿಕಾರಿ ಹೇಳಿದರು. ಜಾರ್ಖಂಡ್ ಹಾಗೂ ಛತ್ತೀಸ್ ಗಡದಲ್ಲಿ ಲಸಿಕೆ ಪಡೆದವರಿಗೆ ನೀಡಿರುವ ಪ್ರಮಾಣಪತ್ರಗಳಲ್ಲಿ ಆಯಾ ರಾಜ್ಯದ ಸಿಎಂಗಳ ಚಿತ್ರಗಳಿದ್ದವು.