ಗಂಗೆಯ ತಟದಲ್ಲಿರುವ ಶವಗಳ ಮೇಲಿನ ಬಟ್ಟೆಯನ್ನು ಕಾರ್ಮಿಕರು ತೆಗೆಯುವ ವೀಡಿಯೋ ವೈರಲ್
ಬೇಕೆಂದು ತೆಗೆದಿಲ್ಲ ಎಂದ ಜಿಲ್ಲಾಡಳಿತ

Twitter/ @kamalkhan_NDTV
ಲಕ್ನೋ: ಪ್ರಯಾಗರಾಜ್ನಲ್ಲಿ ಗಂಗೆಯ ತಟದಲ್ಲಿ ಹೂಳಲಾಗಿದ್ದ ಕೋವಿಡ್ ಸೋಂಕಿತರ ಶವಗಳ ಮೇಲಿನ ಬಟ್ಟೆಗಳನ್ನು ಕಾರ್ಮಿಕರು ತೆಗೆಯುತ್ತಿರುವ ವೀಡಿಯೋ ಮಂಗಳವಾರ ಸಂಜೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದೊಂದು ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಹೇಳಿಕೊಂಡಿದ್ದು ಸ್ವಚ್ಛತಾ ಅಭಿಯಾನದ ವೇಳೆ ಹೀಗಾಗಿರಬಹುದೆಂಬ ಸಬೂಬು ನೀಡಿದ್ದಾರೆ.
ಪ್ರಯಾಗರಾಜ್ ಜಿಲ್ಲೆಯ ಶೃಂಗ್ವೆರ್ಪುರ್ ಘಾಟ್ನಲ್ಲಿ ಶವಗಳ ಮೇಲಿನ ಬಟ್ಟೆಗಳು ಹಾಗೂ ಗುರುತಿಗೆಂದು ಅಳವಡಿಸಲಾಗಿದ್ದ ಬಿದಿರಿನ ಕೋಲುಗಳನ್ನು ಕಾರ್ಮಿಕರು ಸಾಗಿಸುತ್ತಿರುವ ವೀಡಿಯೋ ಕುರಿತು ಮಾತನಾಡಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅನಿಲ್ ಚತುರ್ವೇದಿ "ಘಾಟ್ ಪ್ರದೇಶಗಳನ್ನು ಸ್ವಚ್ಛಗೊಳಿಸುವಾಗ ತಿಳಿಯದೆಯೇ ಈ ಕೆಲಸ ನಡೆದಿರಬಹುದು,'' ಎಂದಿದ್ದಾರೆ.
"ಘಾಟ್ ಪ್ರದೇಶದಲ್ಲಿ ಅಂತ್ಯಕ್ರಿಯೆ ನಡೆಸಲು ಬರುವ ಜನರು ತಮ್ಮ ಬಟ್ಟೆಗಳು, ಪಿಪಿಇ ಕಿಟ್ಗಳು ಹಾಗೂ ಕಟ್ಟಿಗೆಗಳನ್ನು ಅಲ್ಲಿಯೇ ಬಿಟ್ಟು ತೆರಳುತ್ತಾರೆ. ಅದಕ್ಕೆ ನಾವು ಸ್ಥಳವನ್ನು ಸ್ವಚ್ಛಗೊಳಿಸಲು ಹೇಳಿದೆವು. ಆದರೆ ನನಗೆ ತಿಳಿದಿರುವ ಮಟ್ಟಿಗೆ ಬಟ್ಟೆ ತುಂಡುಗಳು ಹಾಗೂ ಬಿದಿರಿನ ಕೋಲುಗಳನ್ನು ತೆಗೆಯಲಾಗಿಲ್ಲ, ಘಾಟ್ ಪ್ರದೇಶ ಕೊಳಕಾಗಿ ಕಾಣದಿರಲಿ ಎಂದು ಸ್ವಚ್ಛತಾ ಕೆಲಸ ಮಾಡಲಾಗಿದೆ'' ಎಂದು ಅವರು ಹೇಳಿದರು.
ಆದರೆ ಕೋವಿಡ್ ಸೋಂಕಿತರ ಮೃತದೇಹಗಳನ್ನು ವಿಲೇವಾರಿ ಮಾಡಲಾಗುತ್ತಿರುವ ರೀತಿಗೆ ಟೀಕೆಗಳನ್ನು ತಪ್ಪಿಸುವ ಯತ್ನವಾಗಿ ಆಡಳಿತ ಇಂತಹ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ ಎಂದು theprint.in ವರದಿ ಮಾಡಿದೆ.
"ಛಾಯಾಗ್ರಾಹಕರು ಪ್ರತಿ ದಿನ ಬಂದು ಫೋಟೋ ಕ್ಲಿಕ್ಕಿಸುತ್ತಾರೆ, ಹಾಗೂ ಆ ಫೋಟೋಗಳು ವೈರಲ್ ಆಗುತ್ತವೆ, ಇದನ್ನು ತಡೆಯುವ ಉದ್ದೇಶದಿಂದ ಮೇಲಿನಂತೆ ಮಾಡಲಾಗಿದೆ,''ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.