ಲಕ್ಷದ್ವೀಪ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶವನ್ನು ತಡೆ ಹಿಡಿದ ಕೇರಳ ಹೈಕೋರ್ಟ್

ಕೊಚ್ಚಿ: ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಮಂಗಳವಾರ ಲಕ್ಷದ್ವೀಪದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಅವರ ಆದೇಶವನ್ನು ತಡೆಹಿಡಿದಿದೆ. ಅಮಿನಿ ದ್ವೀಪದಲ್ಲಿನ ಸಹಾಯಕ ಸಾರ್ವಜನಿಕ ಅಭಿಯೋಜಕರಿಗೆ (ಎಪಿಪಿ) ಮುಂದಿನ ಆದೇಶದ ತನಕ ತುರ್ತು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಚಿವಾಲಯದ ಕಾನೂನು ಕೋಶಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ದ್ವೀಪಗಳಲ್ಲಿ ಪ್ರಾಸಿಕ್ಯೂಟರ್ ಗಳನ್ನು ಪೋಸ್ಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಎಂ.ಆರ್. ಅನಿತಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಗೆ ನಿರ್ದೇಶನ ನೀಡಿದೆ.
ಲಕ್ಷದ್ವೀಪದ ಅಂಡ್ರೊಟ್ ಐಲ್ಯಾಂಡ್ ನ ಮುಹಮ್ಮದ್ ಸಲೀಮ್ ಕೆ.ಪಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಸ್ತುತ ಆದೇಶವು ಅಧಿಕಾರದ ದುರುಪಯೋಗವಾಗಿದೆ ಎಂದು ಅರ್ಜಿದಾರರು ವಾದಿಸಿದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕಾನೂನು ಕ್ರಮಗಳನ್ನು ನಡೆಸುವುದು ಸಹಾಯಕ ಸಾರ್ವಜನಿಕ ಅಭಿಯೋಜಕರ(ಎಪಿಪಿ) ಕರ್ತವ್ಯವಾಗಿದೆ ಎಂದರು.
ಅಂತಹ ಅಧಿಕಾರಿಗಳನ್ನು ಸರಕಾರದ ಇತರ ಕಾನೂನು ಕೆಲಸಗಳಿಗೆ ಅವರ ಜವಾಬ್ದಾರಿಗಳಿಗೆ ಹೆಚ್ಚುವರಿಯಾಗಿ ಬೇರೆ ಸ್ಥಳದಲ್ಲಿ ತೊಡಗಿಸಿಕೊಳ್ಳುವುದು ನ್ಯಾಯಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಆರೋಪದ ಪರಿಶೀಲನೆಗಾಗಿ ಪ್ರಾಸಿಕ್ಯೂಟರ್‌ಗಳನ್ನು ಕವರಟ್ಟಿಯ ದ್ವೀಪಕ್ಕೆ ನಿಯೋಜಿಸಲಾಗಿದೆ ಎಂದು ದ್ವೀಪದ ಉಪ ನ್ಯಾಯಾಧೀಶರು ನ್ಯಾಯಪೀಠಕ್ಕೆ ತಿಳಿಸಿದರು. ಹೀಗಾಗಿ ನ್ಯಾಯಾಲಯಗಳು ಪುನರಾರಂಭವಾದ ನಂತರ ಯಾವುದೇ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂದರು.
“ನ್ಯಾಯಾಲಯಗಳ ಕಾರ್ಯ ಚಟುವಟಿಕೆಗಾಗಿ ನೇಮಕಗೊಂಡ ಪ್ರಾಸಿಕ್ಯೂಟರ್‌ಗಳನ್ನು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ದ್ವೀಪಗಳಲ್ಲಿ ಪೋಸ್ಟ್ ಮಾಡಬೇಕು ಹಾಗೂ ಯಾವುದೇ ಪರಿಶೀಲನಾ ಆರೋಪಗಳನ್ನು ಅವರಿಂದ ಮಾಡಬೇಕಾದರೆ, ಅವರು ಪ್ರಾಸಿಕ್ಯೂಟರ್‌ಗಳಾಗಿ ಕಾರ್ಯನಿರ್ವಹಿಸಬೇಕಾದ ದ್ವೀಪದಲ್ಲಿ ದಾಖಲೆಗಳನ್ನು ಅವರಿಗೆ ರವಾನಿಸಲಾಗಿದೆಯೆಂದು ಆಡಳಿತ ನೋಡಬೇಕು'' ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಆಂಡ್ರೊಟ್ ಹಾಗೂ ಅಮಿನಿ ದ್ವೀಪದಲ್ಲಿ ಕೆಲಸ ಮಾಡುವ ಸಹಾಯಕ ಸಾರ್ವಜನಿಕ ಅಭಿಯೋಜಕರಿಗೆ ಚಾರ್ಜ್‌ಶೀಟ್‌ಗಳ ತಯಾರಿಕೆ ಸೇರಿದಂತೆ ಹಲವಾರು ಇಲಾಖೆಗಳ ಕಾನೂನು ಕೆಲಸಗಳನ್ನು ಮಾಡಲು ತಿಳಿಸಲಾಗಿದೆ ಎಂದು ಅರ್ಜಿದಾರರು ಬೆಟ್ಟು ಮಾಡಿದರು.
ಆಡಳಿತವು ಸಹಾಯಕ ಸಾರ್ವಜನಿಕ ಅಭಿಯೋಜಕರನ್ನು ಸ್ವತಂತ್ರ ಅಧಿಕಾರಿಗಳಂತೆ ಪರಿಗಣಿಸಬೇಕು ಹಾಗೂ ನ್ಯಾಯಾಲಯಗಳಿಗೆ ಸಹಾಯ ಮಾಡಲು ಅವರನ್ನು ಪ್ರಾಥಮಿಕವಾಗಿ ನೇಮಿಸಬೇಕು ಎಂದು ಅರ್ಜಿದಾರರು ವಾದಿಸಿದರು.