ದುರ್ಬಲಗೊಂಡ ಯಾಸ್ ಚಂಡಮಾರುತ, ಬಂಗಾಳದಲ್ಲಿ 3 ಲಕ್ಷ ಮನೆಗಳಿಗೆ ಹಾನಿ

ಹೊಸದಿಲ್ಲಿ: ಗಂಟೆಗೆ 130-140 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯೊಂದಿಗೆ ಯಾಸ್ ಚಂಡಮಾರುತವು ಬೆಳಿಗ್ಗೆ 10.30 ರಿಂದ 11.30 ರ ನಡುವೆ ಬಾಲಸೋರ್‌ನಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿರುವ ಉತ್ತರ ಒಡಿಶಾ ಕರಾವಳಿಯನ್ನು ದಾಟಿದೆ. ಮಧ್ಯಾಹ್ನ 1.30 ಕ್ಕೆ ಅದು ಬಾಲಸೋರ್‌ನಿಂದ ನೈಋತ್ಯಕ್ಕೆ 15 ಕಿ.ಮೀ ದೂರದಲ್ಲಿರುವ ಉತ್ತರ ಕರಾವಳಿ ಒಡಿಶಾಕ್ಕೆ ತಲುಪಿತು.
ಗಂಟೆಗೆ 100-110 ಕಿ.ಮೀ ಗಾಳಿ ಯೊಂದಿಗೆ ಯಾಸ್ ಚಂಡಮಾರುತವು ದುರ್ಬಲಗೊಂಡಿದೆ. ಮಧ್ಯಾಹ್ನ 1.30 ಕ್ಕೆ ಇದು ಬಾಲಸೋರ್‌ನಿಂದ 15 ಕಿ.ಮೀ ದೂರದಲ್ಲಿತ್ತು ಹಾಗೂ ಉತ್ತರ ಕರಾವಳಿ ಒಡಿಶಾದ ಮೇಲೆ ಕೇಂದ್ರೀಕೃತವಾಗಿತ್ತು. ಮುಂದಿನ ಆರು ಗಂಟೆಗಳಲ್ಲಿ ಇದು ಮತ್ತಷ್ಟು ದುರ್ಬಲಗೊಳ್ಳುವ ನಿರೀಕ್ಷೆಯಿದೆ.
ಒಡಿಶಾದಲ್ಲಿ ಚಂಡಮಾರುತದಿಂದ ಬುಧವಾರ ತೀವ್ರವಾಗಿ ಪೀಡಿತವಾಗಿರುವ ಜಿಲ್ಲೆಗಳೆಂದರೆ: ಬಾಲಸೋರ್, ಭದ್ರಕ್, ಜಗತ್ ಸಿಂಗ್‌ಪುರ ಮತ್ತು ಕೇಂದ್ರಪಾರಾ. ಬಂಗಾಳದಲ್ಲಿ ದಕ್ಷಿಣ ಹಾಗೂ ಉತ್ತರ 24 ಪರಗಣಗಳು, ದಿಘಾ, ಪೂರ್ವ ಮೇದಿನಿಪುರ ಹಾಗೂ ನಂದಿಗ್ರಾಮ್ ಹೆಚ್ಚು ಹಾನಿಗೊಳಗಾದವು. ಕೋಲ್ಕತ್ತಾದ ಹದಿಮೂರು ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದವು.
"15 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ, ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ ಹಾಗೂ 134 ಕಿರು ಅಣೆಕಟ್ಟುಗಳು ನಾಶವಾಗಿವೆ. ಅಂದಾಜು ಒಂದು ಕೋಟಿ ಜನರ ಮೇಲ ಪರಿಣಾಮ ಬೀರಿದೆ. ರಾಜ್ಯಕ್ಕೆ ರೂ. 10 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ನೀಡಲಾಗಿದೆ'' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಬಂಗಾಳದ ಕೃಷಿ ಭೂಮಿಗೆ (ಉಪ್ಪುನೀರಿನ ಪ್ರವೇಶದಿಂದಾಗಿ), ಮೀನುಗಾರಿಕೆ, ಪಶುಸಂಗೋಪನೆ ಹಾಗೂ ತೋಟಗಾರಿಕೆ ಸೌಲಭ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಸುಮಾರು 20,000 ಮಣ್ಣಿನ ಮನೆಗಳು ಹಾಗೂ ತಾತ್ಕಾಲಿಕ ಆಶ್ರಯಮನೆಗಳು ನಾಶವಾಗಿವೆ ಅಥವಾ ಹಾನಿಗೊಳಗಾದವು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.