ಲಕ್ಷದ್ವೀಪ ನಾಶಗೊಳಿಸುತ್ತಿರುವ ಅಪ್ರಬುದ್ಧ ಸರ್ವಾಧಿಕಾರಿಗಳು: ರಾಹುಲ್ ಗಾಂಧಿ ಟೀಕೆ

ಹೊಸದಿಲ್ಲಿ, ಮೇ 26: ಲಕ್ಷದ್ವೀಪದಲ್ಲಿ ಕೇಂದ್ರ ಸರಕಾರ ನೇಮಿಸಿರುವ ಪ್ರತಿನಿಧಿ ಜಾರಿಗೊಳಿಸಿರುವ ನಿರ್ಬಂಧಗಳನ್ನು ವಿರೋಧಿಸಿ ಅಲ್ಲಿನ ಜನತೆ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ. ಲಕ್ಷದ್ವೀಪವು ಭಾರತದ ಅನರ್ಘ್ಯ ರತ್ನವಾಗಿದೆ. ಅಧಿಕಾರದಲ್ಲಿರುವ ಅಪ್ರಬುದ್ಧ ಸರ್ವಾಧಿಕಾರಿಗಳು ಅದನ್ನು ನಾಶಗೊಳಿಸುತ್ತಿದ್ದಾರೆ. ಲಕ್ಷದ್ವೀಪದ ಜನರೊಂದಿಗೆ ನಿಲ್ಲುತ್ತೇನೆ’ ಎಂದವರು ಟ್ವೀಟ್ ಮಾಡಿದ್ದಾರೆ. ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ ಪಟೇಲ್ ಅಲ್ಲಿನ ಶಾಂತಿ ಮತ್ತು ಸಂಸ್ಕೃತಿಗೆ ಭಂಗ ತರುತ್ತಿದ್ದಾರೆ. ತನ್ನ ಸ್ವೇಚ್ಛಾನುಸಾರದ ನಿರ್ಬಂಧಗಳಿಂದ ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಲಕ್ಷದ್ವೀಪದಲ್ಲಿ ಮದ್ಯ (ಸಾರಾಯಿ)ದ ಬಳಕೆ, ಗೋಮಾಂಸದ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿ ಅಲ್ಲಿನ ಆಡಳಿತಾಧಿಕಾರಿ ಆದೇಶ ಜಾರಿಗೊಳಿಸಿದ್ದಾರೆ. ಅಲ್ಲದೆ ನದಿ ತೀರದಲ್ಲಿ ಮೀನುಗಾರರು ನಿರ್ಮಿಸಿರುವ ಶೆಡ್‌ಗಳು ಅಕ್ರಮ ನಿರ್ಮಾಣ ಎಂದು ಘೋಷಿಸಿ ಅವನ್ನು ನೆಲಸಮಗೊಳಿಸಿರುವುದು ಖಂಡನಾರ್ಹ ಎಂದು ಲಕ್ಷದ್ವೀಪದಲ್ಲಿರುವ ಬಿಜೆಪಿ ವಿರೋಧಿ ಪಕ್ಷಗಳು ಹಾಗೂ ಕೇರಳ ಸರಕಾರ ಹೇಳಿದೆ. ಪ್ರಫುಲ್ ಪಟೇಲ್ ಪಂಚಾಯತ್‌ನ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ ಮತ್ತು ಸಮಾಜ ವಿರೋಧಿ ಕೃತ್ಯ ತಡೆ ಕಾಯ್ದೆ(ಪಿಎಎಸ್‌ಎ ಕಾಯ್ದೆ) ಸಹಿತ ಹಲವು ನಿರಂಕುಶ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ಸರಕಾರಕ್ಕೆ ಅಥವಾ ಆಡಳಿತಕ್ಕೆ ಲಕ್ಷದ್ವೀಪದ ಸಂಸ್ಕೃತಿಯನ್ನು ನಾಶಗೊಳಿಸುವ ಅಥವಾ ಅಲ್ಲಿನ ಜನರಿಗೆ ಕಿರುಕುಳ ನೀಡುವ ಯಾವುದೇ ಅಧಿಕಾರವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಲಕ್ಷದ್ವೀಪದಲ್ಲಿ ಆಗಿರುವ ಬೆಳವಣಿಗೆಯ ವರದಿ ಆ ದ್ವೀಪದೊಂದಿಗೆ ಸಾಂಸ್ಕೃತಿಕ ಸಂಬಂಧ ಹೊಂದಿರುವ ಕೇರಳದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿಯನ್ನು ವಾಪಾಸು ಕರೆಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಈ ಏಕಪಕ್ಷೀಯ ಮತ್ತು ಜನವಿರೋಧಿ ನಿರ್ಧಾರಗಳು ಲಕ್ಷದ್ವೀಪದ ಸಾಂಪ್ರದಾಯಿಕ ಜನಜೀವನ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ನಾಶಗೊಳಿಸುತ್ತದೆ ಎಂದು ರಾಜ್ಯುದ ಜನತೆ ಆತಂಕಿತರಾಗಿದ್ದಾರೆ. ಆಡಳಿತಾಧಿಕಾರಿಯ ನಿರ್ಧಾರ ಕೇರಳದಲ್ಲಿ ವ್ಯಾಪಕ ಗೊಂದಲ ಮತ್ತು ಪ್ರತಿಭಟನೆಗೆ ಕಾರಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ರೀತಿಯ ಅಪರಾಧ ಕೃತ್ಯ ಅಥವಾ ಕಾನೂನು ಶಿಸ್ತಿನ ಸಮಸ್ಯೆಯಿಲ್ಲದ ಪ್ರದೇಶದಲ್ಲಿ ಗೂಂಡಾ ಕಾಯ್ದೆಯನ್ನು ಅನುಷ್ಟಾನಗೊಳಿಸುವುದು ಮತ್ತು ಜನತೆ ಸಾರಾಯಿ ಸೇವಿಸದಿದ್ದರೂ ಸಾರಾಯಿ ಬಳಕೆಯ ಮೇಲಿನ ನಿಷೇಧವನ್ನು ರದ್ದುಗೊಳಿಸಿರುವುದು, ಮುಸ್ಲಿಂ ವಿರೋಧಿ ಆಕ್ರೋಶ ಬಿರುಗಾಳಿಯಂತೆ ಬೀಸುತ್ತಿರುವ ಸಂಕೇತವಾಗಿದೆ ಎಂದು ಕೇರಳದ ಮಾಜಿ ವಿತ್ತಸಚಿವ ಥಾಮಸ್ ಇಸಾಕ್ ಟ್ವೀಟ್ ಮಾಡಿದ್ದಾರೆ.
ಆದರೆ, ಈಗ ವಿಭಜಕ ರಾಜಕೀಯ ನಡೆಸುತ್ತಿರುವ ಸ್ಥಳೀಯ ರಾಜಕಾರಣಿಗಳ ಭ್ರಷ್ಟಾಚಾರವನ್ನು ಕೊನೆಗೊಳಿಸಲು ಈ ಹೊಸ ನಿಯಮ ಅತ್ಯಗತ್ಯ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.