ಜಾರ್ಖಂಡ್, ಛತ್ತೀಸ್‌ಗಢದಲ್ಲಿ ಅತ್ಯಧಿಕ ಲಸಿಕೆ ವ್ಯರ್ಥ: ಕೇಂದ್ರ ಸರಕಾರ

ಹೊಸದಿಲ್ಲಿ, ಮೇ 26: ದೇಶದ ಹಲವು ರಾಜ್ಯಗಳಲ್ಲಿ ಕೊರೋನ ಸೋಂಕಿನ ವಿರುದ್ಧದ ಲಸಿಕೆಯ ಕೊರತೆ ಇರುವ ಸಂದರ್ಭದಲ್ಲೇ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.
ಈ ಎರಡೂ ರಾಜ್ಯಗಳಲ್ಲಿ ಪ್ರತೀ 3 ಡೋಸ್‌ನಲ್ಲಿ ಒಂದು ಡೋಸ್ ಲಸಿಕೆ ವ್ಯರ್ಥವಾಗುತ್ತಿದೆ. ಅದರಲ್ಲೂ ಲಸಿಕೆ ವ್ಯರ್ಥಗೊಳಿಸುವುದರಲ್ಲಿ ಜಾರ್ಖಂಡ್ ಅಗ್ರಸ್ಥಾನದಲ್ಲಿದೆ ಎಂದು ಇಲಾಖೆ ಹೇಳಿದೆ. ಆದರೆ ಇದನ್ನು ನಿರಾಕರಿಸಿರುವ ಜಾರ್ಖಂಡ್ ಮುಖ್ಯಮಂತ್ರಿ, ಕೋವಿನ್ ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆಯಿದ್ದ ಕಾರಣ ಲಸಿಕೀಕರಣದ ಸರಿಯಾದ ಅಂಕಿಅಂಶ ಅಪ್‌ಲೋಡ್ ಆಗಿಲ್ಲ ಎಂದು ಹೇಳಿದ್ದಾರೆ.
ಲಸಿಕೆ ವ್ಯರ್ಥವಾಗುವ ರಾಷ್ಟ್ರೀಯ ಪ್ರಮಾಣ 6.3% ಆಗಿದೆ. ಲಸಿಕೆ ವ್ಯರ್ಥ ಪ್ರಮಾಣ 1%ಕ್ಕಿಂತ ಕಡಿಮೆಯಿರುವಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ನಿರಂತರವಾಗಿ ಸೂಚಿಸಿದ್ದರೂ ಹಲವು ರಾಜ್ಯಗಳಲ್ಲಿ ಲಸಿಕೆ ವ್ಯರ್ಥವಾಗುವ ಪ್ರಮಾಣ ಹೆಚ್ಚಿದೆ. ಜಾರ್ಖಂಡ್‌ನಲ್ಲಿ 37.3%, ಛತ್ತೀಸ್‌ಗಢದಲ್ಲಿ 30.2%, ತಮಿಳುನಾಡಿನಲ್ಲಿ 15.5%, ಜಮ್ಮು-ಕಾಶ್ಮೀರದಲ್ಲಿ 10.8%, ಮಧ್ಯಪ್ರದೇಶದಲ್ಲಿ 10.7% ಲಸಿಕೆ ವ್ಯಥವಾಗುತ್ತಿರುವುದಾಗಿ ವರದಿಯಾಗಿದೆ. ಇದು ರಾಷ್ಟ್ರೀಯ ಸರಾಸರಿಗಿಂತ ತುಂಬಾ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಸಿಕೀಕರಣ ಅಭಿಯಾನ ಬೃಹತ್ ಮಟ್ಟದಲ್ಲಿ ನಡೆದಾಗ ಸ್ವಲ್ಪಮಟ್ಟಿನ ಲಸಿಕೆ ವ್ಯರ್ಥವಾಗುವುದು ಸಹಜ. ಜನಸಂಖ್ಯೆ ಮತ್ತು ಅಗತ್ಯತೆಯ ಆಧಾರದಲ್ಲಿ ರಾಜ್ಯುಗಳಿಗೆ ಲಸಿಕೆ ಪೂರೈಸಲಾಗುತ್ತದೆ. ಆದ್ದರಿಂದ ಲಸಿಕೆ ವ್ಯರ್ಥವಾಗದಂತೆ ಎಚ್ಚರ ವಹಿಸಬೇಕು ಎಂದು ಇಲಾಖೆ ಹೇಳಿದೆ.
ಆದರೆ ಜಾರ್ಖಂಡ್‌ಗೆ ಕೇಂದ್ರ ಸರಕಾರ ಒದಗಿಸಿರುವ ಲಸಿಕೆ ಹಾಗೂ ಇದುವರೆಗೆ ನೀಡಲಾಗಿರುವ ಲಸಿಕೆಯನ್ನು ಲೆಕ್ಕ ಹಾಕಿದರೆ ರಾಜ್ಯದಲ್ಲಿ ಲಸಿಕೆ ವ್ಯರ್ಥವಾದ ಪ್ರಮಾಣ ಕೇವಲ 4.56% ಎಂದು ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮಾಡಿದ್ದಾರೆ.
ತೀವ್ರ ಉಷ್ಣತೆ ಅಥವಾ ಚಳಿಯಿಂದ, ಅಥವಾ ಲಸಿಕೆಯ ವಾಯಿದೆ ಮುಗಿಯುವುದು, ಕಳ್ಳತನ ಲಸಿಕೆ ವ್ಯರ್ಥವಾಗಲು ಕಾರಣ. ನೋಂದಣಿ ಮಾಡಿಕೊಂಡ ಪ್ರಮಾಣವನ್ನು ಆಧರಿಸಿ ಲಸಿಕೆಯ ಶೀಶೆಯನ್ನು ತೆರೆಯಲಾಗುತ್ತದೆ. ಆದರೆ ನೋಂದಣಿ ಮಾಡಿಕೊಂಡವರು ಲಸಿಕೆ ಹಾಕಿಸಿಕೊಳ್ಳಲು ಬರದಿದ್ದರೆ ಲಸಿಕೆ ವ್ಯರ್ಥವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗುವ ರಾಜ್ಯಗಳಲ್ಲಿ ಲಸಿಕೀಕರಣ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವುದಿಲ್ಲ. ಆದ್ದರಿಂದ ಲಸಿಕೀಕರಣದ ಬಗ್ಗೆ ನಿರ್ಲಕ್ಷ್ಯದ ಧೋರಣೆ ತೋರಬಾರದು. ಡೋಸ್ ವ್ಯರ್ಥವಾಗುವುದು ಎಂದರೆ ಲಸಿಕೆ ನಿರಾಕರಿಸಿದಂತೆ ಎಂದು ಆರೋಗ್ಯ ಇಲಾಖೆ ಹೇಳಿದೆ.