ಭಾರತದ ಕೋವಿಡ್ ಸಾವುಗಳು ಸರಕಾರದ ಲೆಕ್ಕಕ್ಕಿಂತ 14 ಪಟ್ಟು ಹೆಚ್ಚಿದೆ: 'ದಿ ನ್ಯೂಯಾರ್ಕ್ ಟೈಮ್ಸ್' ವರದಿ

ಹೊಸದಿಲ್ಲಿ: ಭಾರತವು ಅಧಿಕೃತವಾಗಿ ಮೇ 24, 2021 ರ ವೇಳೆಗೆ 26.9 ಮಿಲಿಯನ್ (2.69 ಕೋಟಿ) ಕೋವಿಡ್ -19 ಪ್ರಕರಣಗಳು ಹಾಗೂ 307,231 (3.07 ಲಕ್ಷ) ಸಾವುಗಳನ್ನು ವರದಿ ಮಾಡಿದೆ. ಆದರೆ 'ದಿ ನ್ಯೂಯಾರ್ಕ್ ಟೈಮ್ಸ್' ನಡೆಸಿರುವ ವಿಶ್ಲೇಷಣೆಯು ನಿಜವಾದ ಅಂಕಿ-ಅಂಶಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದೆ. 700.7 ಮಿಲಿಯನ್ (70.07 ಕೋಟಿ) ಪ್ರಕರಣಗಳು ಹಾಗೂ 4.2 ಮಿಲಿಯನ್ (42 ಲಕ್ಷ) ಸಾವುಗಳು ಸಂಭವಿಸಿದ್ದು, ಇದು ಸರಕಾರದ ಲೆಕ್ಕಕ್ಕಿಂತ 14 ಪಟ್ಟು ಹೆಚ್ಚಾಗಿದೆ.
ಮೇ 25 ರಂದು Just How Big Could India’s True Covid Toll Be?‘' ಎಂಬ ಶೀರ್ಷಿಕೆಯ ವರದಿಯು ಪ್ರಕಟವಾಗಿದ್ದು,ಪ್ರಕರಣ ಹಾಗೂ ಸಾವಿನ ಎಣಿಕೆಗಳ ಅಧ್ಯಯನ , ಮೂರು ರಾಷ್ಟ್ರೀಯ ಸಿರೊಸರ್ವೇಗಳ ಫಲಿತಾಂಶಗಳು ಹಾಗೂ ಒಂದು ಡಝನ್ ಗಿಂತ ಹೆಚ್ಚು ತಜ್ಞರನ್ನು ಸಂಪರ್ಕಿಸಿದ ಬಳಿಕ ಈ ಅಂದಾಜಿಗೆ ಬಂದಿರುವುದಾಗಿ 'ನ್ಯೂಯಾರ್ಕ್ ಟೈಮ್ಸ್' ಹೇಳುತ್ತದೆ.
ಎಮೋರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಕಯೊಕೊ ಶಿಯೋಡಾ, ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾನ್ ವೈನ್‌ಬರ್ಗರ್, ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಆ್ಯಂಡ್ ಪಾಲಿಸಿ ಡೈರೆಕ್ಟರ್ ಡಾ. ರಮಣನ್ ಲಕ್ಷ್ಮೀನಾರಾಯಣ, ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಪಾಲ್ ನೊವೊಸಾದ್ ರಂತಹ ತಜ್ಞರನ್ನು ಸಂಪರ್ಕಿಸಿದೆ.
ಕಳಪೆ ರೆಕಾರ್ಡ್ ಕೀಪಿಂಗ್ ಹಾಗೂ ವ್ಯಾಪಕ ಪರೀಕ್ಷೆಯ ಕೊರತೆಯನ್ನು ಉಲ್ಲೇಖಿಸಿರುವ ವರದಿಯು, ದೇಶದಲ್ಲಿ ಒಟ್ಟು ಸೋಂಕುಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಕಷ್ಟ ಎಂದು ಹೇಳಿದೆ. ಇದಲ್ಲದೆ, ಅಂಡರ್‌ಕೌಂಟ್ "ತಾಂತ್ರಿಕ, ಸಾಂಸ್ಕೃತಿಕ ಹಾಗೂ ವ್ಯವಸ್ಥಾಪನಾ ಕಾರಣಗಳಿಗಾಗಿ ಹೆಚ್ಚು ಸ್ಪಷ್ಟವಾಗಿದೆ" ಎಂದು ಅದು ಹೇಳಿದೆ.
"ಆಸ್ಪತ್ರೆಗಳು ತುಂಬಿತುಳುಕುತ್ತಿದ್ದ ಕಾರಣ ಅನೇಕ ಕೋವಿಡ್ ಸಾವುಗಳು ಮನೆಯಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸುತ್ತವೆ. ಅದನ್ನು ಅಧಿಕೃತ ಲೆಕ್ಕದಿಂದ ಕೈಬಿಡಲಾಗುತ್ತದೆ. ಸಾವಿಗೆ ಕಾರಣವನ್ನು ದೃಢೀಕರಿಸುವ ಪ್ರಯೋಗಾಲಯಗಳು ಸರಿಯಾಗಿಲ್ಲ” ಎಂದು ಎಮೋರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಕಯೊಕೊ ಶಿಯೋಡಾ ಹೇಳಿದ್ದಾರೆ.
ಕೆಲವು ಕೋವಿಡ್ ಪರೀಕ್ಷೆಗಳು ಲಭ್ಯವಿದೆ; ಆಗಾಗ್ಗೆ ಕುಟುಂಬಗಳು ತಮ್ಮ ಪ್ರೀತಿಪಾತ್ರರು ಕೋವಿಡ್‌ನಿಂದ ಮೃತಪಟ್ಟಿದ್ದಾರೆಂದು ಹೇಳಲು ಇಷ್ಟಪಡುವುದಿಲ್ಲ ಹಾಗೂ ಭಾರತದಲ್ಲಿ ಪ್ರಮುಖ ದಾಖಲೆಗಳನ್ನು ಇಟ್ಟುಕೊಳ್ಳುವ ವ್ಯವಸ್ಥೆಯು ಸರಿಯಾಗಿಲ್ಲ ಎಂದು ಅವರು ಹೇಳಿದರು.
ನೈಜ ಸಂಖ್ಯೆಯ ಸೋಂಕುಗಳು 15 ಪಟ್ಟು ಹೆಚ್ಚಾಗಬಹುದು, ಅಂದರೆ 404.2 ಮಿಲಿಯನ್ (40.42 ಕೋಟಿ) ಹಾಗೂ ಸೋಂಕಿನ ಸಾವಿನ ಪ್ರಮಾಣ (ಐಎಫ್‌ಆರ್) ಶೇಕಡಾ 0.15 ಎಂದು NYT ಹೇಳಿದೆ. ಇದು ಸಾವಿನ ಸಂಖ್ಯೆಯನ್ನು 600,000 (6 ಲಕ್ಷ) ಕ್ಕೆ ಏರಿಸುತ್ತದೆ, ಇದು ಭಾರತ ವರದಿ ಮಾಡಿದ ಅಧಿಕೃತ ಸಂಖ್ಯೆಗಿಂತ ದ್ವಿಗುಣವಾಗಿದೆ.