ಮೇ ತಿಂಗಳೊಂದರಲ್ಲೇ 14ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ: ಕೊರೋನ ಹಾಗೂ ಲಾಕ್ ಡೌನ್ ನಿಂದ ದೇಶದ ಜನರು ತತ್ತರಿಸಿ ಹೋಗಿರುವ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮೇ ತಿಂಗಳೊಂದರಲ್ಲೇ 14ನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದೆ.
ಮೇ 4 ರಿಂದ ನಿರಂತರವಾಗಿ ಬೆಲೆ ಏರಿಕೆ ಮಾಡಲಾಗುತ್ತಿದ್ದು ಮೇ 27ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 39 ಪೈಸೆ ಏರಿಕೆ ಮಾಡಲಾಗಿದೆ.
ಮೇ ತಿಂಗಳಲ್ಲಿ ಈ ತನಕ ಒಟ್ಟು 14 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3.28 ರೂ. ಹಾಗೂ ಪ್ತತಿ ಲೀಟರ್ ಡೀಸೆಲ್ ಮೇಲೆ 3.88 ರೂ. ಹೆಚ್ಚಳ ಮಾಡಲಾಗಿದೆ. ಮೇ 5ರಿಂದ ನಿರಂತರವಾಗಿ 3 ದಿನ ಇಂದನ ಬೆಲೆ ಏರಿಸಲಾಗಿತ್ತು. ಇದಾದ 3 ದಿನ ವಿರಮಿಸಿದ್ದ ಕೇಂದ್ರ ಸರಕಾರ ಬಳಿಕ ಮೇ 10, ಮೇ 11 ಹಾಗೂ 12ರಂದು ಇಂಧನ ಬೆಲೆ ಏರಿಸಿತ್ತು. ಇದಾದ ಬಳಿಕ ದಿನ ಬಿಟ್ಟು ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಲಾಗುತ್ತಿದೆ.
ಈಗ ಬೆಂಗಳೂರಿನಲ್ಲಿ ಪೆಟ್ರೋಲ್ ದರ 96.80 ರೂ. ಡೀಸೆಲ್ 89.70 ರೂ. ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ 99.94 ರೂ., ಡೀಸೆಲ್ 91.87 ರೂ. ಕೋಲ್ಕತಾದಲ್ಲಿ ಪೆಟ್ರೋಲ್ 93.72 ರೂ., ಡೀಸೆಲ್ 87.46 ರೂ. ದಿಲ್ಲಿಯಲ್ಲಿ ಪೆಟ್ರೋಲ್ 93.68 ರೂ. ಹಾಗೂ ಡೀಸೆಲ್ 84.60 ರೂ. ಏರಿಕೆಯಾಗಿದೆ.