ಆರ್ಥಿಕತೆಯನ್ನು ರಕ್ಷಿಸಲು ನೋಟುಗಳನ್ನು ಮುದ್ರಿಸಬೇಕು, ಈಗಲ್ಲದಿದ್ದರೆ ಇನ್ಯಾವಾಗ?: ಬ್ಯಾಂಕರ್ ಉದಯ್ ಕೋಟಕ್ ಪ್ರಶ್ನೆ

ಹೊಸದಿಲ್ಲಿ: ದೀರ್ಘ ಕಾಲದಿಂದ ಬಾಧಿಸುತ್ತಿರುವ ಕೋವಿಡ್ ಸಾಂಕ್ರಾಮಿಕದಿಂದಾಗಿ ನಲುಗಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಭಾರತ ಕರೆನ್ಸಿ ನೋಟುಗಳನ್ನು ಮುದ್ರಿಸುವ ಅಗತ್ಯವಿದೆ ಎಂದು ದೇಶದ ಪ್ರತಿಷ್ಠಿತ ಬ್ಯಾಂಕರ್ ಆಗಿರುವ ಉದಯ್ ಕೋಟಕ್ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿ ವಾಹಿನಿ ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಮೇಲಿನ ಮಾತುಗಳನ್ನು ಹೇಳಿದ್ದಾರೆ. "ನನ್ನ ಅಭಿಪ್ರಾಯದಂತೆ ಸರಕಾರದ ಬ್ಯಾಲೆನ್ಸ್ ಶೀಟ್ ವಿಸ್ತರಿಸುವ ಸಮಯ ಇದಾಗಿದೆ, ಆರ್‍ಬಿಐನ ಬೆಂಬಲದೊಂದಿಗೆ.... ವಿತ್ತೀಯ ವಿಸ್ತರಣೆ ಅಥವಾ ಹಣ ಮುದ್ರಿಸುವುದು. ಇಂತಹ ಒಂದು ಕ್ರಮ ಕೈಗೊಳ್ಳುವ ಸಮಯ ನಮಗೆ ಬಂದಿದೆ... ಈಗ ಅಲ್ಲದೇ ಇದ್ದರೆ ಮತ್ತಿನ್ಯಾವಾಗ?'' ಎಂದು ಕೋಟಕ್ ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
"ಬಡವರಿಗೆ ನೇರ ನಗದು ವರ್ಗಾವಣೆಗೆ ಸರಕಾರ ಜಿಡಿಪಿಯ ಶೇ1ರಷ್ಟು ಅಥವಾ ರೂ 1 ಲಕ್ಷ ಕೋಟಿಯಿಂದ ರೂ 2 ಲಕ್ಷ ಕೋಟಿ ತನಕ ಹಣ ವ್ಯಯಿಸಬೇಕು, ಇದು ಸಮಾಜದ ಕೆಳಸ್ತರದಲ್ಲಿರುವ ಜನರಿಗೆ ಬಲ ನೀಡಲಿದೆ. ಬಡವರಲ್ಲಿ ಅತ್ಯಂತ ಬಡವರಿಗೆ ವೈದ್ಯಕೀಯ ಸವಲತ್ತುಗಳನ್ನು ಒದಗಿಸಬೇಕು" ಎಂದು ಉದಯ್ ಕೋಟಕ್ ಹೇಳಿದರು.