ಲಕ್ಷದ್ವೀಪಕ್ಕೆ ನೇಮಿಸಿರುವ ಆಡಳಿತಾಧಿಕಾರಿಯನ್ನು ವಜಾಗೊಳಿಸುವಂತೆ ಪ್ರಧಾನಿ ಮೋದಿಗೆ ಶರದ್ ಪವಾರ್ ಪತ್ರ

ಹೊಸದಿಲ್ಲಿ: ಲಕ್ಷದ್ವೀಪಕ್ಕೆ ನೂತನ ಆಡಳಿತಾಧಿಕಾರಿಯಾಗಿ ಪೃಫುಲ್ ಪಟೇಲ್ ರನ್ನು ನೇಮಿಸಿದ ಬಳಿಕ ಲಕ್ಷದ್ವೀಪದಾದ್ಯಂತ ಅರಾಜಕತೆ ಪ್ರಾರಂಭವಾಗಿದೆ. ಹಲವಾರು ಹೊಸ ನಿಯಮಗಳು ಅಲ್ಲಿನ ನಿವಾಸಿಗಳನ್ನು ಅಸಹಾಯಕರನ್ನಾಗಿ ಮಾಡಿದೆ. ಈಗಾಗಲೇ ಹಲವಾರು ಮಂದಿ ಸಾಮಾಜಿಕ ತಾಣದಾದ್ಯಂತ ಆಡಳಿತಾಧಿಕಾರಿಯ ನೀತಿಯನ್ನು ಖಂಡಿಸುತ್ತಿದ್ದಾರೆ. ಇದೀಗ ಎನ್ಸಿಪಿ ಮುಖಂಡ ಶರದ್ ಪವಾರ್ ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಜಾಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಲಕ್ಷದ್ವೀಪ ಆಡಳಿತವು ಕೈಗೊಂಡ ಆದೇಶಗಳು ಮತ್ತು ನಿರ್ಧಾರಗಳನ್ನು ಮರುಪರಿಶೀಲಿಸಬೇಕು ಮತ್ತು ಅವುಗಳನ್ನು ಹಿಂಪಡೆಯಲು ಅಗತ್ಯ ನಿರ್ದೇಶನಗಳನ್ನು ರವಾನಿಸಬೇಕು ಎಂದು ಪವಾರ್ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. "ಜನ ಪ್ರತಿನಿಧಿಗಳೊಂದಿಗೆ ನಿಕಟ ಸಹಕಾರದೊಂದಿಗೆ ಕೆಲಸ ಮಾಡುವ ಮತ್ತು ಸ್ಥಳೀಯ ಜನರೊಂದಿಗೆ ಕೆಲಸ ಮಾಡಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳುವ ಹೊಸ ನಿರ್ವಾಹಕರನ್ನು ನೇಮಿಸಬೇಕು ಎಂದು ಶರದ್ ಪವಾರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿರೋಧ ಪಕ್ಷದ ಹೊರತಾಗಿ, ಭಾರತೀಯ ಜನತಾ ಪಕ್ಷದ ಲಕ್ಷದ್ವೀಪ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮೊಹಮ್ಮದ್ ಕಾಸಿಮ್ ಕೂಡ ಪಟೇಲ್ ತೆಗೆದುಕೊಂಡ ನಿರ್ಧಾರಗಳ ಪರಿಶೀಲನೆಗೆ ಕೋರಿದ್ದಾರೆ. ಹೊಸ ನಿಯಮಗಳನ್ನು ಪಟೇಲ್ ಬೆಂಬಲಿಸುವುದಿಲ್ಲ ಅಥವಾ ಪ್ರಶಂಸಿಸುವುದಿಲ್ಲ ಎಂದು ಮೋದಿ ಅವರಿಗೆ ಬರೆದ ಪತ್ರದಲ್ಲಿ ಕಾಸಿಮ್ ಹೇಳಿದ್ದಾರೆ. ಬುಧವಾರ, ಲಕ್ಷದ್ವೀಪದಲ್ಲಿನ ಬಿಜೆಪಿಯ ಯುವ ಮೋರ್ಚಾದ ಎಂಟು ಸದಸ್ಯರು ಪಟೇಲ್ ರ “ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು” ವಿರೋಧಿಸಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.