ಸ್ಥಳೀಯ ನಿಯಮ ಪಾಲನೆಗೆ ಗೂಗಲ್ ಬದ್ಧ: ಸುಂದರ್ ಪಿಚೈ ಪ್ರತಿಕ್ರಿಯೆ

ಹೊಸದಿಲ್ಲಿ, ಮೇ 27: ಸ್ಥಳೀಯ ನಿಯಮಗಳ ಪಾಲನೆಗೆ ಮತ್ತು ಸರಕಾರದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಗೂಗಲ್ ಬದ್ಧವಾಗಿದೆ ಎಂದು ಗೂಗಲ್‌ನ ಸಿಇಒ(ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಸುಂದರ್ ಪಿಚೈ ಹೇಳಿದ್ದಾರೆ.
ನಾವು ಕಾರ್ಯನಿರ್ವಹಿಸುವ ಪ್ರತಿಯೊಂದು ದೇಶದಲ್ಲೂ ಸ್ಥಳೀಯ ಕಾನೂನನ್ನು ಗೌರವಿಸುತ್ತೇವೆ ಹಾಗೂ ರಚನಾತ್ಮಕವಾಗಿ ಕೆಲಸ ಮಾಡುತ್ತೇವೆ. ನಮ್ಮ ಬಳಿ ಸ್ಪಷ್ಟ ಪಾರದರ್ಶಕ ವರದಿಯಿದೆ. ಸರಕಾರದ ಕೋರಿಕೆಯನ್ನು ಪಾಲಿಸುವಾಗ ಅದನ್ನು ವರದಿಯಲ್ಲಿ ಎತ್ತಿತೋರಿಸುತ್ತೇವೆ ಎಂದವರು ಹೇಳಿದ್ದಾರೆ.
ಏಶ್ಯಾ ಪೆಸಿಫಿಕ್ ವಲಯದ ಆಯ್ದ ವರದಿಗಾರರೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಮುಕ್ತ ಮತ್ತು ಸ್ವತಂತ್ರ ಅಂತರ್ಜಾಲ ಎಂಬುದು ಮೂಲಾಧಾರವಾಗಿದ್ದು ಈ ವಿಷಯದಲ್ಲಿ ಭಾರತ ಸುದೀರ್ಘ ಪರಂಪರೆಯನ್ನು ಹೊಂದಿದೆ. ಒಂದು ಸಂಸ್ಥೆಯಾಗಿ ಮುಕ್ತ ಮತ್ತು ಸ್ವತಂತ್ರ ಅಂತರ್ಜಾಲ ವ್ಯವಸ್ಥೆಯ ಮೌಲ್ಯ ಹಾಗೂ ಅನುಕೂಲಗಳ ಬಗ್ಗೆ ನಮಗೆ ಸ್ಪಷ್ಟತೆಯಿದೆ ಮತ್ತು ಇದನ್ನು ನಾವು ಬೆಂಬಲಿಸುತ್ತೇವೆ. ಈ ನಿಟ್ಟಿನಲ್ಲಿ ವಿಶ್ವದೆಲ್ಲೆಡೆಯ ರಾಷ್ಟ್ರಗಳೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಲಿಕೆಯ ಒಂದು ಭಾಗವಾಗಿದೆ ಎಂಬುದು ನಮ್ಮ ಅಭಿಮತವಾಗಿದೆ. ಗೂಗಲ್ ಯಾವಾಗಲೂ ಕಾನೂನಿನನ್ವಯದ ಪ್ರಕ್ರಿಯೆಯನ್ನು ಗೌರವಿಸುತ್ತದೆ. ವಿರೋಧಿಸುವ ಅಗತ್ಯವಿದ್ದರೆ ವಿರೋಧಿಸುತ್ತೇವೆ. ಈ ಸಮತೋಲನವನ್ನು ವಿಶ್ವದೆಲ್ಲೆಡೆ ಪಾಲಿಸಿಕೊಂಡು ಬಂದಿದ್ದೇವೆ. ತಂತ್ರಜ್ಞಾನವು ಸಮಾಜವನ್ನು ವ್ಯಾಪಕವಾಗಿ ಹಾಗೂ ಆಳವಾಗಿ ಸಂಪರ್ಕಿಸುತ್ತಿರುವುದರಿಂದ ಸರಕಾರ ನಿಯಮದ ಚೌಕಟ್ಟನ್ನು ರೂಪಿಸುವುದನ್ನು ನಾವು ನಿರೀಕ್ಷಿಸುತ್ತೇವೆ.
ಯುರೋಪ್ನಲ್ಲಿರುವ ಕೃತಿಸ್ವಾಮ್ಯದ ನಿಯಮವಿರಲಿ ಅಥವಾ ಭಾರತದಲ್ಲಿನ ಮಾಹಿತಿ ನಿಯಂತ್ರಣ ನಿಯಮವಿರಲಿ, ಇದು ಸಹಜ ಪ್ರಕ್ರಿಯೆ ಎಂಬುದು ನಮ್ಮ ಭಾವನೆಯಾಗಿದೆ ಎಂದು ಪಿಚೈ ಅಭಿಪ್ರಾಯಪಟ್ಟಿದ್ದಾರೆ.
ಫೆ.25ರಂದು ಘೋಷಿಸಲಾಗಿರುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ಹೊಸ ಐಟಿ ಕಾಯ್ದೆಯು ಬೃಹತ್ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಪಾಲನಾ ಅಧಿಕಾರಿ, ನೋಡಲ್ ಸಂಪರ್ಕಾಧಿಕಾರಿ, ಸ್ಥಾನಿಕ ಕುಂದುಕೊರತೆ ಅಧಿಕಾರಿಯ ನೇಮಕ ಸಹಿತ ಕೆಲವು ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ ಭಾರತದಲ್ಲಿ ಸಂಸ್ಥೆಯ ಸಂಪರ್ಕ ವಿಳಾಸವನ್ನು ವೆಬ್ ಸೈಟ್ ನಲ್ಲಿ ಅಥವಾ ಮೊಬೈಲ್ ನಲ್ಲಿ ಪ್ರಕಟಿಸಬೇಕು. 50 ಲಕ್ಷಕ್ಕಿಂತಲೂ ಅಧಿಕ ನೋಂದಾಯಿತ ಬಳಕೆದಾರರು ಇರುವ ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಈ ನಿಯಮ ಪಾಲನೆಗೆ 3 ತಿಂಗಳ ಅವಕಾಶ ನೀಡಲಾಗಿತ್ತು. ಸರಕಾರ ಆಕ್ಷೇಪಿಸುವ ಯಾವುದೇ ವಿಷಯಗಳನ್ನು 36 ಗಂಟೆಯೊಳಗೆ, ನಗ್ನತೆ ಬಿಂಬಿಸುವ ಮತ್ತು ಮಾರ್ಫ್ ಮಾಡಲಾದ (ಫೋಟೋದಲ್ಲಿ ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ಅಂಟಿಸುವುದು)ಫೋಟೋಗಳನ್ನು 24 ಗಂಟೆಯೊಳಗೆ ತಮ್ಮ ವೇದಿಕೆಯಿಂದ ತೆಗೆದುಹಾಕಬೇಕಾಗಿದೆ.
ಹೊಸ ಕಾನೂನು ಡಿಜಿಟಲ್ ವೇದಿಕೆ(ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್, ಗೂಗಲ್ ಇತ್ಯಾದಿ)ಗಳಲ್ಲಿ ಪ್ರಸಾರವಾಗುವ ವಿಷಯಗಳಿಗೆ ಆಯಾ ಮಾಧ್ಯಮಗಳನ್ನು ಹೆಚ್ಚು ಉತ್ತರದಾಯಿ ಹಾಗೂ ಹೊಣೆಗಾರರನ್ನಾಗಿಸಿದೆ ಎಂದು ಸರಕಾರದ ಅಧಿಸೂಚನೆ ಹೇಳಿದೆ. ಗೂಢಲಿಪಿ ಸಂದೇಶದ ಮಾಹಿತಿ ಒದಗಿಸಬೇಕೆಂದು ಹೊಸ ನಿಯಮದಲ್ಲಿ ಸೂಚಿಸಿರುವುದು ಗೌಪ್ಯತೆ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿರುವ ವಾಟ್ಸ್ಯಾಪ್, ಹೊಸ ನಿಯಮದ ವಿರುದ್ಧ ದಿಲ್ಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.