ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನವು ಬದುಕನ್ನು ಸುಗಮಗೊಳಿಸಲಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ,ಮೇ 27: ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ(ಎಚ್ಡಿಎಚ್ಎಂ)ದ ಪುನರ್ಪರಿಶೀಲನೆಗಾಗಿ ಗುರುವಾರ ಇಲ್ಲಿ ನಡೆದ ಉನ್ನತಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು,ನಾಗರಿಕರು ಈ ಅಭಿಯಾನದ ಮೂಲಕ ಹಲವಾರು ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು,ಅದು ಅವರ ಬದುಕುಗಳನ್ನು ಸುಗಮಗೊಳಿಸಲಿದೆ ಎಂದು ಹೇಳಿದರು.
ವೈದ್ಯರೊಂದಿಗೆ ಟೆಲಿ-ಸಮಾಲೋಚನೆ,ಪ್ರಯೋಗಾಲಯ ಸೇವೆ,ಡಿಜಿಟಲ್ ವಿಧಾನದ ಮೂಲಕ ವೈದ್ಯರಿಗೆ ಪರೀಕ್ಷಾ ವರದಿಗಳು ಅಥವಾ ಆರೋಗ್ಯ ದಾಖಲೆಗಳ ರವಾನೆ ಮತ್ತು ಡಿಜಿಟಲ್ ಪಾವತಿಯ ಸೌಲಭ್ಯಗಳು ದೇಶಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡಿದಾಗ ಮಾತ್ರ ಅವರಿಗೆ ಎಚ್ಡಿಎಚ್ಎಮ್ನ ಉಪಯಕ್ತತೆಯು ಗೋಚರವಾಗುತ್ತದೆ ಎಂದು ಹೇಳಿದ ಮೋದಿ,ಅಭಿಯಾನದಡಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ಕ್ರಮಗಳನ್ನು ತ್ವರಿತಗೊಳಿಸುವಂತೆ ನಿರ್ದೇಶ ನೀಡಿದರು. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಸಮನ್ವಯಗೊಳಿಸುವಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ,ಆರೋಗ್ಯ ಸಚಿವಾಲಯ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳಿಗೆ ಅವರು ಸೂಚಿಸಿದರು.
ಪ್ರಧಾನಿಯವರು 2020ರ ತನ್ನ ಸ್ವಾತಂತ್ರೋತ್ಸವ ಭಾಷಣದಲ್ಲಿ ಅಭಿಯಾನದ ಆರಂಭವನ್ನು ಪ್ರಕಟಿಸಿದಾಗಿನಿಂದ ಡಿಜಿಟಲ್ ಮಾಡ್ಯೂಲ್ಗಳು ಮತ್ತು ರಿಜಿಸ್ಟ್ರಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ ಹಾಗು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭಿಯಾನವು ಜಾರಿಗೊಂಡಿದೆ. ಈವರೆಗೆ ಸುಮಾರು 11.9 ಲಕ್ಷ ಆರೋಗ್ಯ ಐಡಿಗಳನ್ನು ಸೃಷ್ಟಿಸಲಾಗಿದೆ ಮತ್ತು ಅಭಿಯಾನದ ವೇದಿಕೆಯಲ್ಲಿ 3,106 ವೈದ್ಯರು ಮತ್ತು 1,490 ಆಸ್ಪತ್ರೆಗಳ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಯುನಿಫೈಡ್ ಹೆಲ್ತ್ ಇಂಟರ್ಫೇಸ್(ಯುಎಚ್ಐ) ಅನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು. ಇದು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾಗೂ ಆ್ಯಪ್ಗಳು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಭಾಗವಾಗುವುದನ್ನು ಸಾಧ್ಯವಾಗಿಸಲಿದೆ. ಯುಎಚ್ಐ ಬಳಕೆದಾರರಿಗೆ ಅಗತ್ಯ ಆರೋಗ್ಯಸೇವೆಗಳನ್ನು ಶೋಧಿಸಲು ಮತ್ತು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಿದೆ ಎಂದೂ ಅದು ತಿಳಿಸಿದೆ.