ಅದಾರ್ ಪೂನಾವಾಲಾಗೆ ಝಡ್ ಪ್ಲಸ್ ಭದ್ರತೆ: ಮಹಾರಾಷ್ಟ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
ಮುಂಬೈ, ಮೇ 27: ಕೋವಿಶೀಲ್ಡ್ ಲಸಿಕೆ ಉತ್ಪಾದಿಸುವ ಸೆರಂ ಸಂಸ್ಥೆಯ ಸಿಇಒ ಆದರ್ ಪೂನಾವಾಲಾಗೆ ಝಡ್ + ಭದ್ರತೆ ಒದಗಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.
ಆದರ್ ಪೂನಾವಾಲಾ ದೇಶಕ್ಕೆ ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ. ನಮಗೆ ತಿಳಿದಿರುವಂತೆ ಅವರಿಗೆ ವೈ + ಭದ್ರತೆ ಒದಗಿಸಲಾಗಿದೆ. ಹೆಚ್ಚಿನ ಭದ್ರತೆ ಅಗತ್ಯವಿದ್ದರೆ ರಾಜ್ಯ ಸರಕಾರ ಒದಗಿಸಬೇಕು’ ಎಂದು ನ್ಯಾಯಾಧೀಶರಾದ ಎಸ್ಎಸ್ ಶಿಂಧೆ ಮತ್ತು ಎನ್ಆರ್ ಬೋರ್ಕರ್ ಅವರಿದ್ದ ನ್ಯಾಯಪೀಠ ಹೇಳಿದೆ.
ಈ ಅರ್ಜಿ ಸಲ್ಲಿಸಲು ಮಾನೆಗೆ ಯಾವ ಸ್ಥಾನಾಧಿಕಾರವಿದೆ ಎಂದು ಹೈಕೋರ್ಟ್ ಪ್ರಶ್ನಿಸಿದಾಗ, ಯಾವುದೇ ವ್ಯಕ್ತಿ ಕ್ರಿಮಿನಲ್ ಅರ್ಜಿ ಸಲ್ಲಿಸಬಹುದು ಎಂದು ಮಾನೆ ಉತ್ತರಿಸಿದರು. ಭಾರತಕ್ಕೆ ಒಳ್ಳೆಯ ಹೆಸರಿದ್ದು ಇಂತಹ ಅರ್ಜಿಗಳ ವಿಚಾರಣಾ ಕಲಾಪವು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರಬಹುದು ಎಂಬುದನ್ನು ಈ ವಿಷಯದಲ್ಲಿ ವಾದ ಮಂಡಿಸುವಾಗ ಅರ್ಜಿದಾರರು ಮರೆಯಬಾರದು ಎಂದು ಹೈಕೋರ್ಟ್ ಹೇಳಿದೆ.
ವಕೀಲರಾದ ದತ್ತಾ ಮಾನೆ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 1ಕ್ಕೆ ನಿಗದಿಗೊಳಿಸಿದೆ.
ಲಸಿಕೆ ಪೂರೈಸುವ ವಿಷಯದಲ್ಲಿ ಪೂನಾವಾಲಾಗೆ ಜೀವಬೆದರಿಕೆ ಹಾಕಿರುವ ಬಗ್ಗೆ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಜೀವಬೆದರಿಕೆ ಕರೆ ಹಿನ್ನೆಲೆಯಲ್ಲಿ ಪೂನಾವಾಲಾ ಕುಟುಂಬ ಸಹಿತ ಲಂಡನ್ಗೆ ತೆರಳಿದ್ದಾರೆ.