ಮುಸ್ಲಿಂ ಬಾಹುಳ್ಯದ ಲಕ್ಷದ್ವೀಪದಲ್ಲೊಂದು ಶಿವ ದೇವಾಲಯ: ಫೇಸ್ ಬುಕ್ ಪೋಸ್ಟ್ ವೈರಲ್

ಹೊಸದಿಲ್ಲಿ: ಸದ್ಯ ಲಕ್ಷದ್ವೀಪ ಸುದ್ದಿಯಲ್ಲಿರುವ ಸಮಯದಲ್ಲಿ ಕವರಟ್ಟಿಯ ದೇವಸ್ಥಾನವೊಂದರ ಬಗ್ಗೆ ಕೇರಳದ ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡಿರುವ ಫೇಸ್‌ಬುಕ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರವಾಸ ಪ್ರಿಯ ಆದರ್ಶ್ ವಿಶ್ವನಾಥ್ ಕಳೆದ ವರ್ಷ ಜನವರಿಯಲ್ಲಿ ದ್ವೀಪಗಳಿಗೆ ಭೇಟಿ ನೀಡಿದ್ದರು. “ದೊಡ್ಡ ಆಲದ ಮರವನ್ನು ಹೊಂದಿರುವ ಶಿವ ದೇವಾಲಯವನ್ನು ನೋಡಿ ನಾನು ತುಂಬಾ ಸಂತೋಷಪಟ್ಟೆ. ನಾನು ತಂಗಿದ್ದ ದ್ವೀಪವಾಸಿಗಳು ಈ ಸ್ಥಳಕ್ಕೆ ಭೇಟಿ ನೀಡಲು ನನ್ನನ್ನು ಪ್ರೋತ್ಸಾಹಿಸಿದರು, ”ಎಂದು ಅವರು ‘The Hindu’ಗೆ ತಿಳಿಸಿದರು.
“ಆಶ್ಚರ್ಯಪಡಬೇಡಿ, ಈ ಶಾಂತ ಹಾಗೂ ಸುಂದರವಾದ ದೇವಾಲಯವು 99 ಶೇಕಡಾ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಲಕ್ಷದ್ವೀಪದಲ್ಲಿದೆ. ದ್ವೀಪದ ಕೆಲವು ಮಸೀದಿಗಳಿಗಿಂತ ಇದು ಹೆಚ್ಚು ವಿಶಾಲವಾಗಿದೆ’’ ಎಂದು ವಿಶ್ವನಾಥ್ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಲಕ್ಷದ್ವೀಪ ದ್ವೀಪಗಳಲ್ಲಿ 99 ಶೇ. ದಷ್ಟು ಜನಸಂಖ್ಯೆ ಹೊಂದಿರುವವರು ಈ ಜಾಗವನ್ನು ಅತಿಕ್ರಮಣ ಮಾಡಲು ಅಥವಾ ಕೆಡವುವ ಕುರಿತು ಎಂದಿಗೂ ಯೋಚಿಸಲಿಲ್ಲ. 1 ಶೇ. ಜನಸಂಖ್ಯೆಯನ್ನು ತಮ್ಮೊಂದಿಗೆ ಹೊಂದಿರುವ ದ್ವೀಪವಾಸಿಗಳ ವಿಶಾಲ ಹೃದಯ ಹಾಗೂ ಸೌಹಾರ್ದತೆಯನ್ನು ಇದು ತೋರಿಸುತ್ತದೆ ಎಂದು ವಿಶ್ವನಾಥ್ ಬರೆದಿದ್ದಾರೆ.
ದ್ವೀಪವು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಂದ ತುಂಬಿದೆ ಎಂದು ಹೇಳುವವರು ಪ್ರೀತಿ ಹಾಗೂ ವಾತ್ಸಲ್ಯವನ್ನು ಅನುಭವಿಸಲು ಒಮ್ಮೆ ಅಲ್ಲಿಗೆ ಭೇಟಿ ನೀಡಬೇಕು ಎಂದು ಅವರು ಹೇಳಿದರು.
ಫೇಸ್‌ಬುಕ್ ಪೋಸ್ಟ್ ಜೊತೆಗೆ ದೇವಾಲಯದ ಪ್ರವೇಶದ್ವಾರದ ಚಿತ್ರವಿದೆ. ಫಲಕದಲ್ಲಿ ಹೆಸರನ್ನು ಇಂಗ್ಲಿಷ್, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬರೆಯಲಾಗಿದೆ. ವಿಶ್ವನಾಥ್ ಅವರ ಫೇಸ್ ಬುಕ್ ಪೋಸ್ಟ್ ಶೀಘ್ರದಲ್ಲೇ 19,000 ಲೈಕ್ ಹಾಗೂ 25,000 ಷೇರುಗಳನ್ನು ಪಡೆದಿದೆ.
ಐದು ದಿನಗಳ ದ್ವೀಪ ಪ್ರವಾಸದಲ್ಲಿ ವಿಶ್ವನಾಥ್ ಅವರು ಕೇರಳದ ನೈರ್ಮಲ್ಯದ ಬಗ್ಗೆ ಸ್ಥಳೀಯ ಅಧಿಕಾರಿಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡಿದ್ದರು. ವಿಶ್ವನಾಥ್ ಅವರು ಕೊಲ್ಲಂ ಜಿಲ್ಲೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.