ಮಹಾರಾಷ್ಟ್ರ: ಕೊರೋನ ಲಸಿಕೆ ಎಂದು ಮಕ್ಕಳಿಗೆ ನೀಡುವ ಲಸಿಕೆಗಳ ಕಳವು

ಮುಂಬೈ, ಮೇ 28: ಮಹಾರಾಷ್ಟ್ರದ ಥಾಣೆಯಲ್ಲಿರುವ ಆರೋಗ್ಯ ಕೇಂದ್ರದ ಒಳನುಗ್ಗಿದ ಕಳ್ಳರು ಕೊರೋನ ಲಸಿಕೆ ಎಂದು ಮಕ್ಕಳಿಗೆ ನೀಡಲಾಗುವ ಔಷಧಗಳ 300 ವಿಭಿನ್ನ ಲಸಿಕೆಯ ಸೀಸೆಗಳನ್ನು ಕಳವುಗೈದಿದ್ದಾರೆ.
ಉಲ್ಲಾಸ್ನಗರದ ಮಂಗ್ರುಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಬೆಳಗ್ಗೆ ಕೆಲಸಕ್ಕೆ ಹಾಜರಾದ ಸಂದರ್ಭ ಕಳವು ನಡೆದಿರುವುದು ಬೆಳಕಿಗೆ ಬಂತು. ಕಳ್ಳರು ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ನಾನಗೃಹದ ಕಿಟಕಿಯ ಕದಲಿಸಿ ಒಳನುಗ್ಗಿದ್ದಾರೆ.
ಮಕ್ಕಳ ಔಷಧಗಳ ಸೀಸೆಗಳು ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸ್ಟಿಕ್ಕರ್ ಹೊಂದಿರುವುದರಿಂದ ಕಳ್ಳರು ಕೋವಿಶೀಲ್ಡ್ ಲಸಿಕೆ ಎಂದು ಭಾವಿಸಿ ಕಳವುಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳ್ಳರು ಸಿಸಿಟಿವಿ ಕೆಮರಾದ ಡಿವಿಆರ್ ಹಾಗೂ ಮಾನಿಟರ್ ಅನ್ನು ಕಳವುಗೈದಿದ್ದಾರೆ. ಇದರಿಂದ ಘಟನೆಯ ಯಾವುದೇ ದೃಶ್ಯಾವಳಿ ಉಳಿದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘‘ನಮ್ಮಲ್ಲಿ ಕೊರೋನ ಲಸಿಕೆಯ ಕೊರತೆ ಇತ್ತು. ಆದರೆ, ಶುಕ್ರವಾರದ ವರೆಗೆ ಲಸಿಕೆ ಸ್ವೀಕರಿಸಿರಲಿಲ್ಲ. ಕಳ್ಳರು ಮಕ್ಕಳ ಲಸಿಕೆಯ ಶೇ. 40ರಷ್ಟು ಭಾಗವನ್ನು ಕಳವುಗೈದಿದ್ದಾರೆ’’ ಎಂದು ಮಂಗ್ರುಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ದೀಪಕ್ ಚಾವ್ಲಾ ಹೇಳಿದ್ದಾರೆ.
ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.