ಜಿಎಸ್ಟಿ ಮಂಡಳಿ ಸಭೆ: ಲಸಿಕೆಗಳ ಮೇಲಿನ ತೆರಿಗೆ ದರ ಕಡಿತಗೊಳಿಸದಿರಲು ತೀರ್ಮಾನ

ಹೊಸದಿಲ್ಲಿ,ಮೇ 28: ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಲ್ಲಿ ನಡೆದ ಸರಕುಗಳು ಮತ್ತು ಸೇವೆಗಳ ತೆರಿಗೆಗಳ (ಜಿಎಸ್ಟಿ) ಮಂಡಳಿಯ ಸಭೆಯು ಕೋವಿಡ್-19 ಲಸಿಕೆಗಳು ಮತ್ತು ವೈದ್ಯಕೀಯ ಪೂರೈಕೆಗಳ ಮೇಲಿನ ತೆರಿಗೆ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆದರೆ ಕಪ್ಪು ಶಿಲೀಂಧ್ರದ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಿಯ ಆಮದಿನ ಮೇಲಿನ ಸುಂಕಕ್ಕೆ ವಿನಾಯಿತಿಯನ್ನು ನೀಡಿದೆ.
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮನ್, ಸಚಿವರ ಸಮಿತಿಯೊಂದು ಲಸಿಕೆಗಳು ಮತ್ತು ವೈದ್ಯಕೀಯ ಪೂರೈಕೆಗಳ ಮೇಲಿನ ತೆರಿಗೆ ಸ್ವರೂಪದ ಬಗ್ಗೆ ಚರ್ಚಿಸಲಿದೆ ಎಂದು ತಿಳಿಸಿದರು.
ಕೇಂದ್ರ ವಿತ್ತ ಸಚಿವರ ಅಧ್ಯಕ್ಷತೆಯ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಜಿಎಸ್ಟಿ ಮಂಡಳಿಯು ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರದ ಚಿಕಿತ್ಸೆಯಲ್ಲಿ ಬಳಕೆಯಾಗುವ ಆ್ಯಂಫೊಟೆರ್ಸಿನ್-ಬಿ ಔಷಧಿಯ ಆಮದಿಗೆ ಏಕೀಕೃತ ಜಿಎಸ್ಟಿಯಿಂದ ವಿನಾಯಿತಿಯನ್ನು ನೀಡಿದೆ. ಹಾಲಿ ಲಸಿಕೆಗಳ ಮೇಲೆ ಶೇ.5ರಷ್ಟು ಜಿಎಸ್ಟಿಯನ್ನು ವಿಧಿಸಲಾಗಿದೆ.
ವಿದೇಶಗಳಿಂದ ಆಮದಾಗುವ ಉಚಿತ ಕೋವಿಡ್ -19 ಸಂಬಂಧಿತ ಸಾಮಗ್ರಿಗಳ ಮೇಲಿನ ಏಕೀಕೃತ ಜಿಎಸ್ಟಿ ವಿನಾಯಿತಿ ಮುಂದುವರಿಸಲು ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದ ಸೀತಾರಾಮನ್, ಕೇಂದ್ರವು 1.58 ಲ.ಕೋ.ರೂ.ಗಳನ್ನು ಸಾಲವಾಗಿ ಪಡೆದುಕೊಳ್ಳಬೇಕು ಮತ್ತು ಜಿಎಸ್ಟಿ ಜಾರಿಯಿಂದಾಗಿ ರಾಜ್ಯಗಳ ಆದಾಯ ಕೊರತೆಯನ್ನು ತುಂಬಿಕೊಡಬೇಕು ಎಂದೂ ಸಮಿತಿಯು ನಿರ್ಧರಿಸಿದೆ ಎಂದರು.
ಮಂಡಳಿಯು ತಡವಾಗಿ ರಿಟರ್ನ್ ಗಳನ್ನು ಸಲ್ಲಿಸುವವರಿಗೆ ಕ್ಷಮಾ ಯೋಜನೆಯನ್ನು ಪ್ರಕಟಿಸುವ ಮೂಲಕ ಸಣ್ಣ ಜಿಎಸ್ಟಿ ಪಾವತಿದಾರರಿಗೆ ನೆಮ್ಮದಿಯನ್ನು ಒದಗಿಸಿದೆ.