ಕಾಂಗೊ: ಮತ್ತೊಮ್ಮೆ ಜ್ವಾಲಾಮುಖಿ ಸ್ಫೋಟವಾಗುವ ಭೀತಿ; 4 ಲಕ್ಷ ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಕಿನ್ಶಾಸ (ಡಿ. ಆರ್. ಕಾಂಗೊ), ಮೇ 29: ವೌಂಟ್ ನಯಿರಗೊಂಗೊ ಜ್ವಾಲಾಮುಖಿ ಪರ್ವತ ಮತ್ತೊಮ್ಮೆ ಸ್ಫೋಟಿಸಬಹುದು ಎಂಬುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ, ಗೋಮ ನಗರದ ಸುಮಾರು 4 ಲಕ್ಷ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಪಲಾಯನಗೈದಿದ್ದಾರೆ.
ಗೋಮ ನಗರದ ಪಶ್ಚಿಮಕ್ಕೆ 25 ಕಿಲೋಮೀಟರ್ ದೂರದಲ್ಲಿರುವ ಸಕೆ ಎಂಬ ಪಟ್ಟಣದಲ್ಲಿ ಲಕ್ಷಾಂತರ ಮಂದಿ ಆಶ್ರಯ ಪಡೆದಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಜ್ವಾಲಾಮುಖಿಯು ಸ್ಫೋಟಿಸಿದ ಬಳಿಕ, ಕಿವು ಸರೋವರದ ದಂಡೆಯಲ್ಲಿರುವ ಗೋಮ ನಗರದ ಜನರು ಹೆದರಿಕೆಯಿಂದಲೇ ದಿನಗಳೆಯುತ್ತಿದ್ದಾರೆ.
ವಾರಾಂತ್ಯದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಬಳಿಕ ಲಾವಾರಸವು ನದಿಯೋಪಾದಿಯಲ್ಲಿ ಹರಿದಿದೆ. ಸುಮಾರು 40 ಮಂದಿ ಮೃತಪಟ್ಟಿದ್ದಾರೆ ಹಾಗೂ 20,000 ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಅಂದಿನಿಂದ ನೂರಾರು ಪಶ್ಚಾತ್ ಕಂಪನಗಳು ಸಂಭವಿಸಿವೆ.
ಜ್ವಾಲಾಮುಖಿಯು ಮತ್ತೊಮ್ಮೆ ಸ್ಫೋಟಗೊಳ್ಳಬಹುದು ಎಂಬ ಭೀತಿಯಲ್ಲಿ ಸುಮಾರು 80,000 ಮನೆಗಳ ಸುಮಾರು 4 ಲಕ್ಷ ಜನರನ್ನು ತೆರವುಗೊಳಿಸಲಾಗಿದೆ.
Next Story





