ಬೈಕ್‍ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಲಾಠಿ ಪಿಎಸ್ಸೈ: ಆರೋಪ
ಯುವಕನ ತಲೆಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ, ಮೇ 29: ಅಗತ್ಯ ವಸ್ತು ಖರೀದಿಗಾಗಿ ಹತ್ತಿರದ ಎಟಿಎಂಗೆ ತೆರಳುತ್ತಿದ್ದ ಯುವಕನ ಮೇಲೆ ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ಸುಖಾನಂದ ಶಿಂಧೆ ಲಾಠಿ ಬೀಸಿ ಅಮಾನುಷವಾಗಿ ಥಳಿಸಿರುವ ಆರೋಪ ಕೇಳಿಬಂದಿದೆ.
ಹಳೇ ಹುಬ್ಬಳ್ಳಿ ನಿವಾಸಿ ರೆಹಮತ್ ಕಾರತಗರ ಎಂಬಾತ ಗಾಯಗೊಂಡ ಯುವಕನಾಗಿದ್ದು, ಲಾಠಿ ಬೀಸಿದ ರಭಸಕ್ಕೆ ಯುವಕ ಬೈಕ್‍ನಿಂದ ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದರಿಂದ ಕಿಮ್ಸ್ ಗೆ ಶಿಫಾರಸ್ಸು ಮಾಡಲಾಗಿದೆ ಎಂದು ಯುವಕನ ಕುಟುಂಬಸ್ಥರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಕೋವಿಡ್ ಲಾಕ್‍ಡೌನ್ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗಾಗಿ ಹಣ ಬೇಕಾಗಿದ್ದರಿಂದ ರೆಹಮತ್ ಕಾರತಗರ ಎಟಿಎಂಗೆ ಹೊರಟಿದ್ದ. ಈ ಸಂದರ್ಭದಲ್ಲಿ ಇಂಡಿಪಂಪ್ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಪಿಎಸ್ಸೈ ವಿಚಾರಣೆ ನೆಪದಲ್ಲಿ ಲಾಠಿಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೋವಿಡ್ ತಡೆಗಟ್ಟಲು ರಾಜ್ಯ ಸರಕಾರ ಪೊಲಿಸ್ ಇಲಾಖೆಗೆ ಅನಗತ್ಯ ಓಡಾಡುವ ಸಾರ್ವಜನಿಕರಿಗೆ ದಂಡ ಹಾಗೂ ತಿಳಿ ಹೇಳಬೇಕು ಹೊರತು ಲಾಠಿ ಬೀಸದಂತೆ ಸೂಚಿಸಿದೆ. ಆದರೂ, ಪಿಎಸ್ಸೈ ಸುಖಾನಂದ ಶಿಂಧೆ ಹಲ್ಲೆ ನಡೆಸಿದ್ದು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.







