ಛತ್ತೀಸ್ ಗಢ: ಭದ್ರತಾ ಪಡೆಗಳ ಶಿಬಿರ ವಿರೋಧಿಸಿ ಆದಿವಾಸಿಗಳ ಪ್ರತಿಭಟನೆ
ರಾಯ್ಪುರ, ಮೇ 29: ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಮೃತರಾದ ಮೂವರು ಬುಡಕಟ್ಟು ಸಮುದಾಯದ ವ್ಯಕ್ತಿಗಳ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮತ್ತು ಛತ್ತೀಸ್ಗಢದ ಸಿಲ್ಗೇರ್ ಪ್ರದೇಶದಲ್ಲಿರುವ ಭದ್ರತಾ ಪಡೆಗಳ ಶಿಬಿರವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ಶನಿವಾರ 15ನೇ ದಿನಕ್ಕೆ ಕಾಲಿರಿಸಿದೆ ಎಂದು ಮೂಲಗಳು ಹೇಳಿವೆ.
ಛತ್ತೀಸಗಢದಲ್ಲಿ ಮಾವೋವಾದಿಗಳ ಅಡಗುತಾಣವಿರುವ ಪ್ರದೇಶಕ್ಕೆ ಹೆಬ್ಬಾಗಿಲು ಎಂದು ಪರಿಗಣಿಸಲಾದ ಸಿಲ್ಗೇರ್ನಲ್ಲಿ ಭದ್ರತಾ ಪಡೆಗಳು ಶಿಬಿರ ನಿರ್ಮಿಸಿದ್ದು ಇದನ್ನು ಮೇ 12ರಂದು ಉದ್ಘಾಟಿಸಲಾಗಿದೆ. ಇದೇ ಪ್ರದೇಶದಲ್ಲಿ ಮಾವೋವಾದಿಗಳ 3 ವಿಭಾಗಗಳು ಸಕ್ರಿಯವಾಗಿವೆ ಎನ್ನಲಾಗಿದೆ. ಆದರೆ ಈ ಪ್ರದೇಶದಲ್ಲಿ ಪೊಲೀಸರು, ಭದ್ರತಾ ಪಡೆಗಳ ಓಡಾಟದಿಂದ ತಮ್ಮ ಸ್ವಾತಂತ್ರ್ಯ, ಹಕ್ಕು ಹಾಗೂ ಚಲನವಲನಕ್ಕೆ ತೊಂದರೆಯಾಗುತ್ತದೆ ಎಂಬುದು ಸ್ಥಳೀಯರ ವಾದವಾಗಿದೆ. ನಾವು ರಸ್ತೆ ನಿರ್ಮಿಸುವುದನ್ನು ವಿರೋಧಿಸುವುದಿಲ್ಲ, ಆದರೆ ಇಲ್ಲಿ ಶಿಬಿರದ ಬದಲು ಶಾಲೆ, ಆಸ್ಪತ್ರೆ ನಿರ್ಮಿಸಿ ಎಂದು 30ಕ್ಕೂ ಅಧಿಕ ಗ್ರಾಮಗಳಿಂದ ಬಂದಿರುವ ಆದಿವಾಸಿಗಳು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೇ 17ರಂದು ಶಿಬಿರದಲ್ಲಿದ್ದ ಪೊಲೀಸ್ ಸಿಬಂದಿ ಮೇಲೆ ಸ್ಥಳೀಯರು ಕಲ್ಲೆಸೆದಿದ್ದಾರೆ. ಈ ಸಂದರ್ಭ ಪೊಲೀಸರು ನಡೆಸಿದ ಗೋಲೀಬಾರ್ಗೆ 3 ಆದಿವಾಸಿಗಳು ಮೃತಪಟ್ಟಿದ್ದಾರೆ. ಮೃತಪಟ್ಟವರು ಮಾವೋವಾದಿಗಳು ಎಂದು ಪೊಲೀಸರು ಹೇಳುತ್ತಿದ್ದಾರೆ. ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮೃತಪಟ್ಟವರಲ್ಲಿ 22 ವರ್ಷದ ಸೋಮ್ಲಿ ಪುನೆಮ್ ಎಂಬ ಯುವತಿ ಸೇರಿದ್ದು ಈಕೆ 3 ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಶುಕ್ರವಾರ ಸ್ಥಳೀಯರು ಸಿಲ್ಗೇರ್ನಲ್ಲಿ ಒಟ್ಟು ಸೇರಿ ಮೃತಪಟ್ಟವರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಿದ್ದಾರೆ. ಅವರ ಸಾವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಶಿಬಿರವನು್ನ ಇಲ್ಲಿಂದ ತೆರವುಗೊಳಿಸುವವರೆಗೆ ಮತ್ತು ಗೋಲಿಬಾರ್ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸೋಮ್ಲಿಯ ಪತಿ ಹೇಳಿದ್ದಾನೆ.







