ಕೇರಳ ಹೆದ್ದಾರಿ ದರೋಡೆ ಪ್ರಕರಣ: ಬಿಜೆಪಿ ಮುಖಂಡನ ವಿಚಾರಣೆ

ಸಾಂದರ್ಭಿಕ ಚಿತ್ರ
ತಿರುವನಂತಪುರಂ, ಮೇ 29: ಎಪ್ರಿಲ್ 3ರಂದು ಎರ್ನಾಕುಳಂ-ತ್ರಿಶೂರ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವೊಂದರಿಂದ 3.5 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಪೊಲೀಸರು ಶುಕ್ರವಾರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಎಂ.ಗಣೇಶನ್ ರ ವಿಚಾರಣೆ ನಡೆಸಿರುವುದಾಗಿ ವರದಿಯಾಗಿದೆ.
ಹಿರಿಯ ಆರೆಸ್ಸೆಸ್ ಮುಖಂಡರೂ ಆಗಿರುವ ಗಣೇಶನ್ ರನ್ನು ಸುಮಾರು 3 ಗಂಟೆ ವಿಚಾರಣೆ ನಡೆಸಲಾಗಿದೆ. ಬಿಜೆಪಿಯ ರಾಜ್ಯಪ್ರಧಾನ ಕಚೇರಿಯ ಕಾರ್ಯದರ್ಶಿ ಜಿ.ಗಿರೀಶನ್ ರನ್ನು ಶನಿವಾರ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಕೋಝಿಕೋಡ್ ಮೂಲದ ಆರೆಸ್ಸೆಸ್ ಕಾರ್ಯಕರ್ತ ಧರ್ಮರಾಜನ್ ಗೆ ಸೇರಿದ 25 ಲಕ್ಷ ರೂ. ಹಣದ ಸಹಿತ ವಾಹನದಲ್ಲಿ ಹೋಗುತ್ತಿದ್ದಾಗ ಹಣವನ್ನು ದರೋಡೆ ಮಾಡಲಾಗಿದೆ ಎಂದು ಎಪ್ರಿಲ್ 7ರಂದು ವಾಹನದ ಚಾಲಕ ಪೊಲೀಸರಿಗೆ ದೂರು ನೀಡಿದ್ದ. ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದಾಗ ಲೂಟಿ ಮಾಡಿದ ಮೊತ್ತ 3.5 ಕೋಟಿ ರೂ. ಎಂಬ ಮಾಹಿತಿ ಹೊರಬಿದ್ದಿದೆ.
ವಿಧಾನಸಭೆ ಚುನಾವಣೆಗೆ ಖರ್ಚು ಮಾಡಲು ಚುನಾವಣಾ ನಿಧಿಯಾಗಿ ಈ ಮೊತ್ತವನ್ನು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದರಂತೆ, ಬಿಜೆಪಿ ಮುಖಂಡರ ಸಹಿತ ಹಲವು ಮುಖಂಡರಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಬಿಜೆಪಿ ಮುಖಂಡ, ಧರ್ಮರಾಜನ್ ನಿಕಟರ್ತಿ ಕೆಜಿ ಕಾರ್ಥರನ್ನು ಗುರುವಾರ ಪೊಲೀಸರು ವಿಚಾರಣೆ ನಡೆಸಿದ್ದರು.





