ಚಿಕ್ಕಮಗಳೂರು: ಮೇಯಲು ಬಿಟ್ಟಿದ್ದ ಜಾನುವಾರುಗಳೊಂದಿಗೆ ಮನೆಗೆ ಬಂದ ಜಿಂಕೆಮರಿ !

ಚಿಕ್ಕಮಗಳೂರು, ಮೇ 29: ಚಿಕ್ಕಮಗಳೂರು ಪ್ರಕೃತಿ ಸೌಂದರ್ಯನವನ್ನು ಹೊದ್ದು ಮಲಗಿದ್ದು, ತನ್ನೊಡಲಿನಲ್ಲಿ ನೂರಾರು ಪ್ರಾಣಿ ಸಂಕುಲವನ್ನು ಹೊಂದಿದ್ದು ನಿತ್ಯ ಪ್ರವಾಸಿಗರು ಇಲ್ಲಿನ ಪ್ರಾಣಿ ಸಂಕುಲವನ್ನು ನೋಡಿ ಕಣ್ತುಂಬಿಕೊಳ್ಳಲು ಬರುತ್ತಾರೆ.
ಅವುಗಳ ಮುಗ್ಧತೆ, ಚಿನ್ನಾಟಕ್ಕೆ ಮನಸೋಲುತ್ತಾರೆ. ಅದರಲ್ಲೂ ಮೈತುಂಬ ಬೆಳ್ಳಿಚುಕ್ಕಿಗಳ ನ್ನು ಇರಿಸಿಕೊಂಡು ಚೆಂಗನೆ ನೆಗೆದು ಕಾನನ ಸೇರುವ ಜಿಂಕೆಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಅದೇ ಜಿಂಕೆಮರಿ ನಿಮ್ಮ ಮನೆಗೆ ಬಂದು ಬಿಟ್ಟರೇ ?
ಹೌದು....ಕಾಡಿಗೆ ಮೇಯಲು ಹೋಗಿದ್ದ ಹಸುಗಳ ಜೊತೆ ಜಿಂಕೆ ಮರಿಯೊಂದು ಮನೆಗೆ ಬಂದಿದ್ದಲ್ಲದೇ ನೇರವಾಗಿ ಮನೆಯೊಳಗೆ ಬಂದು ಬಿಟ್ಟಿದೆ. ಈ ಪ್ರಸಂಗ ಜಿಲ್ಲೆಯ ಮೂಡಿಗೆರೆ ತಾಲೂಕು ಕಿರುಗುಂದ ಗ್ರಾಮದ ಉದುಸೆ ಗ್ರಾಮದ ರಾಜೇಗೌಡರ ಮನೆಯಲ್ಲಿ ನಡೆದಿದ್ದು, ಅಚ್ಚರಿ ಮೂಡಿಸಿದೆ.
ಎಂದಿನಂತೆ ಶುಕ್ರವಾರ ಮೇಯಲು ಕಾಡಿಗೆ ಬಿಟ್ಟ ಹಸುಗಳು ಸಂಜೆ ಮನೆಗೆ ಬರುವಾಗ ಹಸುಗಳ ಜೊತೆ ಪುಟ್ಟ ಜಿಂಕೆ ಮರಿಯೂ ಬಂದಿದೆ. ಯಾರ ಭಯವಿಲ್ಲದೇ ಮನೆಯೊಳಗೆ ಬಂದು ಅಚ್ಚರಿ ಮೂಡಿಸಿದೆ. ಜಿಂಕೆ ಮರಿಯನ್ನು ಕಂಡ ಮನೆಯವರು ಸಂತೋಷಗೊಂಡು ಮುದ್ದಾಡಿದ್ದಾರೆ. ಅದರೊಟ್ಟಿಗೆ ಸೆಲ್ಫೀಯನ್ನು ತೆಗೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಮನೆಯಲ್ಲೇ ಇರಿಸಿಕೊಂಡು ಜೋಪಾನ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಹಸುಗಳೊಟ್ಟಿಗೆ ಜಿಂಕೆಮರಿ ಮನೆಗೆ ಬಂದಿದ್ದನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ರಾಜೇಗೌಡರ ಮನೆಗೆ ಬಂದ ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಜಿಂಕೆ ಮರಿಯನ್ನು ಕರೆದೊಯ್ದು ರಕ್ಷಿಸಿದ್ದಾರೆ.
.jpg)







