ಕೇಂದ್ರದಿಂದ ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಕರ್ನಾಟಕ ಸ್ವೀಕರಿಸಿದ 1800 ವೆಂಟಿಲೇಟರ್ಗಳು ಉಪಯೋಗ ಶೂನ್ಯ: ವರದಿ

ಸಾಂದರ್ಭಿಕ ಚಿತ್ರ
ಪ್ರಯಾಗ್ರಾಜ್, ಮೇ 29: ಕರ್ನಾಟಕದಲ್ಲಿ ಆಸ್ಪತ್ರೆಗಳು ವೆಂಟಿಲೆಂಟರ್ ಹಾಗೂ ಆಮ್ಲಜನಕದ ಕೊರತೆ ಎದುರಿಸುತ್ತಿರುವ ನಡುವೆ ಕೇಂದ್ರ ಸರಕಾರದಿಂದ ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಸ್ವೀಕರಿಸಲಾದ 1,800 ವೆಂಟಿಲೇಟರ್ಗಳು ಉಪಯೋಗ ಶೂನ್ಯವಾಗಿವೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ವರದಿ ಮಾಡಿದೆ.
ರಾಜ್ಯಕ್ಕೆ ಕಳೆದ ವರ್ಷ ಕೊರೋನದ ಮೊದಲನೇ ಅಲೆಯ ಸಂದರ್ಭ ಪಿಎಂ ಕೇರ್ಸ್ ನಿಧಿಯ ಅಡಿಯಲ್ಲಿ ಪೂರೈಸಲಾದ 3,200 ವೆಂಟಿಲೇಟರ್ಗಳಲ್ಲಿ ಇದುವರೆಗೆ ಕೇವಲ 1,400 ವೆಂಟಿಲೇಟರ್ಗಳು ಮಾತ್ರ ಬಳಕೆಯಾಗಿವೆ. ಕೊರೋನ ಮೊದಲನೇ ಅಲೆಯ ಬಳಿಕ ಸುಮಾರು 2000 ವೆಂಟಿಲೇಟರ್ಗಳನ್ನು ಸ್ವೀಕರಿಸಲಾಗಿತ್ತು. ಎರಡನೇ ಅಲೆಯ ಸಂದರ್ಭ ಉಳಿದ ವೆಂಟಿಲೇಟರ್ಗಳನ್ನು ಸ್ವೀಕರಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ರಾಜ್ಯದಲ್ಲಿ ಈ ವರ್ಷ ಕೊರೋನ ಸೋಂಕಿನ ಎರಡನೇ ಅಲೆ ಬರುವ ವರೆಗೆ ಕೇವಲ 150 ವೆಂಟಿಲೇಟರ್ಗಳು ಮಾತ್ರ ಬಳಕೆಯಾಗಿವೆ. ಉಳಿದ 1,400 ವೆಂಟಿಲೇಟರ್ಗಳನ್ನು ಆಸ್ಪತ್ರೆಗಳಿಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ವಿತರಿಸಲಾಗಿತ್ತು ಎಂದು ವರದಿ ಹೇಳಿದೆ. ವೆಂಟಿಲೇಟರ್ಗಳ ಕಾರ್ಯ ನಿರ್ವಹಣೆಗೆ ತಂತ್ರಜ್ಞರು, ವೈದ್ಯರು, ಅನೆಸ್ತಿಯಾ ತಜ್ಞರು ಹಾಗೂ ನರ್ಸ್ಗಳಂತಹ ನುರಿತ ಸಿಬ್ಬಂದಿಯ ಕೊರತೆ ಇದ್ದುದರಿಂದ ಆಸ್ಪತ್ರೆಗಳಲ್ಲಿ ಉಳಿದ 1,800 ವೆಂಟಿಲೇಟರ್ಗಳು ಬಳಕೆಯಾಗದೆ ಹಾಗೇ ಉಳಿದುಕೊಂಡಿವೆ. ಇತರ ಕೆಲವು ವೆಂಟಿಲೇಟರ್ಗಳು ತಾಂತ್ರಿಕ ದೋಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವರದಿ ಹೇಳಿದೆ.







