ಕೊರೋನ ವೈರಸ್ ಮೂಲದ ತನಿಖೆಗೆ ರಾಜಕೀಯ ಅಡ್ಡಿ: ಡಬ್ಲ್ಯುಎಚ್ಒ

ಜಿನೀವ (ಸ್ವಿಟ್ಸರ್ಲ್ಯಾಂಡ್), ಮೇ 29: ಕೋವಿಡ್-19 ಸಾಂಕ್ರಾಮಿಕದ ಮೂಲವನ್ನು ಪತ್ತೆಹಚ್ಚುವ ಪ್ರಯತ್ನಗಳಿಗೆ ರಾಜಕೀಯವು ತಡೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶುಕ್ರವಾರ ಹೇಳಿದೆ ಹಾಗೂ ಈ ರಹಸ್ಯವನ್ನು ಬಗೆಹರಿಸುವ ಕೆಲಸವನ್ನು ವಿಜ್ಞಾನಿಗಳಿಗೆ ಬಿಡಬೇಕು ಎಂದಿದೆ.
‘‘ರಾಜಕೀಯದಿಂದ ವಿಜ್ಞಾನವನ್ನು ಬೇರ್ಪಡಿಸಬೇಕೆಂದು ನಾವು ಬಯಸುತ್ತೇವೆ. ಈ ಸಾಂಕ್ರಾಮಿಕದ ಮೂಲಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ಹಾಗೂ ಧನಾತ್ಮಕ ವಾತಾವರಣದಲ್ಲಿ ನಮಗೆ ಉತ್ತರಗಳು ಬೇಕು. ಅವುಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ನಾವು ಮುಂದೆ ಸಾಗಬೇಕಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ಮುಖ್ಯಸ್ಥ ಮೈಕಲ್ ರಯಾನ್ ಹೇಳಿದರು.
‘‘ರಾಜಕೀಯದಿಂದಾಗಿ ಈ ಇಡೀ ಪ್ರಕ್ರಿಯೆಯು ಕಲುಷಿತಗೊಂಡಿದೆ’’ ಎಂದು ಅವರು ವಿಷಾದಿಸಿದರು.
ಕೊರೋನ ವೈರಸ್ ಎಲ್ಲಿಂದ ಬಂತು ಎಂಬ ಬಗ್ಗೆ ಹೊಸ ಮತ್ತು ಆಳ ತನಿಖೆ ನಡೆಸಬೇಕೆಂಬ ಭಾರೀ ಒತ್ತಡವನ್ನು ವಿಶ್ವ ಆರೋಗ್ಯ ಸಂಸ್ಥೆ ಎದುರಿಸುತ್ತಿದೆ.
ಕೋವಿಡ್-19 ವೈರಸ್ ಮೊದಲು ಚೀನಾದಲ್ಲಿ ಪ್ರಾಣಿಯೊಂದರಿಂದ ಮಾನವನಿಗೆ ಬಂತೇ ಅಥವಾ ಅಲ್ಲಿನ ಪ್ರಯೋಗಾಲಯವೊಂದರಿಂದ ಸೋರಿಕೆಯಾಯಿತೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ದೇಶದ ಗುಪ್ತಚರ ಸಮುದಾಯಕ್ಕೆ ಈ ವಾರ ಆದೇಶ ನೀಡಿದ್ದಾರೆ.
ಕೊರೋನ ವೈರಸ್ ಚೀನಾದ ವುಹಾನ್ ನಗರದಲ್ಲಿರುವ ಜೈವಿಕ ಪ್ರಯೋಗಾಲಯವೊಂದರಿಂದ ಸೋರಿಕೆಯಾಯಿತು ಎಂಬುದಾಗಿ ಹೆಚ್ಚಿನ ದೇಶಗಳು ಮತ್ತು ಪರಿಣತರು ಭಾವಿಸಿದ್ದಾರೆ. ಆದರೆ, ಚೀನಾ ಈ ಆರೋಪಗಳನ್ನು ನಿರಾಕರಿಸುತ್ತಿದೆ.







