ಪಿಎಸ್ಸೈಗೆ ಜಾಮೀನು ನೀಡಿದರೆ ದುರುಪಯೋಗ ಸಾಧ್ಯತೆ: ತಕರಾರು ಅರ್ಜಿ ಸಲ್ಲಿಕೆ
ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣ
ಚಿಕ್ಕಮಗಳೂರು, ಮೇ 29: ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಸೈ ಜಾಮೀನು ಅರ್ಜಿಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಜೂ.1ಕ್ಕೆ ಮುಂದೂಡಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಆರೋಪಿಯಾಗಿರುವ ಪಿಎಸ್ಸೈ ಅರ್ಜುನ್ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಎಫ್‍ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಪಿಎಸ್ಸೈ ತಮ್ಮ ವಕೀಲರ ಮೂಲಕ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಮೇ 28ರಂದು ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿತ್ತು.
ಜಾಮೀನು ಅರ್ಜಿ ಸಂಬಂಧ ಸರಕಾರಿ ಅಭಿಯೋಜಕಿ ಭಾವನಾ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದು, ಆರೋಪಿ ಪಿಎಸ್ಸೈ ಆಗಿದ್ದು, ಜಾಮೀನು ನೀಡಿದಲ್ಲಿ ಇಲಾಖೆ ಪ್ರಭಾವ ಬೀರುತ್ತಾರೆ. ಆರ್ಥಿಕವಾಗಿ ರಾಜಕೀಯವಾಗಿ ಬಲಾಢ್ಯರಾಗಿರುವ ಪಿಎಸ್ಸೈ ನಿರೀಕ್ಷಣಾ ಜಾಮೀನನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಪ್ರಕರಣದ ಸಂತ್ರಸ್ತ ಪುನೀತ್ ಹಾಗೂ ಆತನ ಕುಟುಂಬದ ವಿರುದ್ಧ ಮತ್ತೆ ಇಂತಹದ್ದೇ ಕೃತ್ಯ ಎಸಗುವ ಸಾಧ್ಯತೆ ಇದೆ. ಆದ್ದರಿಂದ ನ್ಯಾಯಾಲಯ ಸಾಮಾಜಿಕ ಕಳಕಳಿಯಿಂದ ಜಾಮೀನು ನೀಡಬಾರದೆಂದು ನ್ಯಾಯಾಲಯಕ್ಕೆ ತಿಳಿಸಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಜೂ.1ಕ್ಕೆ ಮುಂದೂಡಿದ್ದಾರೆಂದು ತಿಳಿದು ಬಂದಿದೆ.







