ಪೊಲೀಸ್ ಅಧಿಕಾರಿ ನಾಪತ್ತೆ ಪ್ರಕರಣದ ತನಿಖೆ ನಡೆಸಿ: ಉ.ಪ್ರ. ಸರಕಾರಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ಆದೇಶ
ಪ್ರಯಾಗ್ ರಾಜ್, ಮೇ 29: ಐಪಿಎಸ್ ಅಧಿಕಾರಿ ಹಾಗೂ ಉತ್ತರಪ್ರದೇಶ ಮಹೋಬಾದ ಮಾಜಿ ಪೊಲೀಸ್ ಅಧೀಕ್ಷಕ ಮಣಿ ಲಾಲ್ ಪಾಟಿದಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಸಲ್ಲಿಸಲಾದ ಹೇಬಿಯಾಸ್ ಕಾರ್ಪಸ್ ರಿಟ್ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಮೇ 27ರಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ಲಂಚದ ಬೇಡಿಕೆ ಒಡ್ಡಿರುವ ಆರೋಪದ ಬಗೆಗಿನ ವೀಡಿಯೊವನ್ನು ಕಲ್ಲು ಕ್ರಶರ್ ವ್ಯಾಪಾರಿ ಇಂದ್ರಮಣಿ ತ್ರಿಪಾಠಿ ಎಂಬವರು ಬಿಡುಗಡೆ ಮಾಡಿದ ಬಳಿಕ 2020 ಸೆಪ್ಟಂಬರ್ನಲ್ಲಿ ಮಣಿಲಾಲ್ ಪಾಟೀದಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು. ಅನಂತರ 2020 ನವೆಂಬರ್ 27ರಂದು ಅವರು ನಾಪತ್ತೆಯಾಗಿದ್ದರು.
ಉತ್ತರಪ್ರದೇಶ ಪೊಲೀಸರು ಕೆಲವು ದಿನಗಳ ಹಿಂದೆ ಅವರ ವಿರುದ್ಧ ಲುಕೌಟ್ ನೋಟಿಸು ಜಾರಿಗೊಳಿಸಿದ್ದರು. ಅಲ್ಲದೆ, ಅವರ ಬಗ್ಗೆ ಮಾಹಿತಿ ನೀಡಿದವರಿಗೆೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಪಾಟೀದಾರ್ ಅವರನ್ನು ಸಿಲುಕಿಸುವ ವೀಡಿಯೊ ಬಿಡುಗಡೆಯಾದ ಬಳಿಕ 2020 ಸೆಪ್ಟಂಬರ್ 8ರಂದು ಇಂದ್ರಮಣಿ ತ್ರಿಪಾಠಿ ಅವರು ತನ್ನ ಕಾರಿನಲ್ಲಿ ಗುಂಡಿನಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು 5 ದಿನಗಳ ಬಳಿಕ ಮೃತಪಟ್ಟಿದ್ದರು.
ಈ ನಡುವೆ ಇಂದ್ರಮಣಿ ತ್ರಿಪಾಠಿ ಅವರ ಸಹೋದರ ರವಿಕಾಂತ್ ಸುಲಿಗೆ ಆರೋಪ ಹೊರಿಸಿ ಪಾಟೀದಾರ್ ಹಾಗೂ ಇತರ ಕೆಲವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಸೆಪ್ಟಂಬರ್ 9ರಂದು ಪಾಟೀದಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು ಅಲ್ಲದೆ, ಮೆಹೂಬಾ ಪೊಲೀಸರು ಅವರ ವಿರುದ್ಧ ಹತ್ಯೆ ಯತ್ನದ ಪ್ರಕರಣ ದಾಖಲಿಸಿದ್ದರು. ಅನಂತರ ತ್ರಿಪಾಠಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ತ್ರಿಪಾಠಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂತಿಮ ತೀರ್ಮಾನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹತ್ಯೆ ಯತ್ನದ ಆರೋಪ ಆತ್ಮಹತ್ಯೆಗೆ ಪ್ರಚೋದನೆ ಎಂಬುದಾಗಿ ಬದಲಾಗಿತ್ತು.







