ಪುದುಚೇರಿಯಲ್ಲಿ 37 ಮಂದಿಗೆ ಬ್ಲಾಕ್ ಫಂಗಸ್ ಸೋಂಕು: ನಾಲ್ವರು ಸಾವು
ಪುದುಚೇರಿ, ಮೇ 29: ಪುದುಚೇರಿಯಲ್ಲಿ ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾದ ಒಟ್ಟು 37 ಮಂದಿಯಲ್ಲಿ 5 ಮಂದಿ ಪುದುಚೇರಿಯವರು ಹಾಗೂ 32 ಮಂದಿ ತಮಿಳುನಾಡಿನವರು ಎಂದು ಪುದುಚೇರಿ ಆರೋಗ್ಯ ಇಲಾಖೆ ತಿಳಿಸಿದೆ.
ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾಗಿ ಪುದುಚೇರಿಯ ಓರ್ವ ಹಾಗೂ ತಮಿಳುನಾಡಿನ ಮೂವರು ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಸಮಗ್ರ ರೋಗಗಳ ಕಣ್ಗಾವಲು ಕಾಯಕ್ರಮ (ಐಡಿಎಸ್ಪಿ)ದ ರಾಜ್ಯ ಕಣ್ಗಾವಲು ಅಧಿಕಾರಿ ಡಾ. ಎಲ್. ರವಿವರ್ಮಾ ತಿಳಿಸಿದ್ದಾರೆ. ಪ್ರಸ್ತುತ 19 ಮಂದಿ ಜೆಐಪಿಎಂಇಆರ್ ಹಾಗೂ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಐಜಿಎಂಸಿಆರ್ಐ)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘‘ಕರೈಕಾಲ್ನ ಇಬ್ಬರು ಸೇರಿದಂತೆ ಪುದುಚೇರಿಯಲ್ಲಿ ಇದುವರೆಗೆ 5 ಮಂದಿ ಕೊರೋನ ರೋಗಿಗಳಿಗೆ ಬ್ಲಾಕ್ ಫಂಗಸ್ ಸೋಂಕು ತಗುಲಿದೆ. ಮೂವರು ಜೆಐಪಿಎಂಇಆರ್, ಒಬ್ಬರು ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ (ಐಜಿಎಂಸಿಆರ್ಐ)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾರೆ’’ ಎಂದು ಡಾ. ರವಿವರ್ಮಾ ಹೇಳಿದ್ದಾರೆ.





