ರಹಸ್ಯ ಸಮಾರಂಭದಲ್ಲಿ 3ನೇ ವಿವಾಹವಾದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

photo ://twitter.com/Winchesterfbpe
ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ವೆಸ್ಟ್ ಮಿನ್ ಸ್ಟರ್ ಕ್ಯಾಥಡ್ರಲ್ ನಲ್ಲಿ ಶನಿವಾರ ನಡೆದ ರಹಸ್ಯ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ ಎಂದು ಬ್ರಿಟನ್ ನ ಪತ್ರಿಕೆಗಳು ವರದಿ ಮಾಡಿವೆ. ಜಾನ್ಸನ್ ಗೆ ಇದು ಮೂರನೇ ವಿವಾಹವಾಗಿದೆ.
ಜಾನ್ಸನ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿಯ ವಕ್ತಾರರು ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಸೆಂಟ್ರಲ್ ಲಂಡನ್ ನಲ್ಲಿ ನಡೆದಿದ್ದ ಸಮಾರಂಭಕ್ಕೆ ಕೊನೆಯ ಕ್ಷಣದಲ್ಲಿ ಅತಿಥಿಗಳಿಗೆ ಆಹ್ವಾನ ನೀಡಿ ಕರೆಸಲಾಯಿತು. ಪ್ರಧಾನಿ ಜಾನ್ಸನ್ ಕಚೇರಿಯ ಹಿರಿಯ ಸದಸ್ಯರಿಗೂ ಕೂಡ ವಿವಾಹದ ಮಾಹಿತಿ ಇರಲಿಲ್ಲ ಎಂದು ಎರಡು ದಿನಪತ್ರಿಕೆಗಳು ವರದಿ ಮಾಡಿವೆ.
ಕೋವಿಡ್-19 ನಿರ್ಬಂಧಗಳಿಂದಾಗಿ ಇಂಗ್ಲೆಂಡ್ನಲ್ಲಿನ ವಿವಾಹಗಳು ಪ್ರಸ್ತುತ 30 ಜನರಿಗೆ ಸೀಮಿತವಾಗಿದೆ.
ಕ್ಯಾಥೋಲಿಕ್ ಕ್ಯಾಥಡ್ರಲ್ ಅನ್ನು ಮಧ್ಯಾಹ್ನ 1: 30 ಕ್ಕೆ ಏಕಾಏಕಿ ಮುಚ್ಚಲಾಯಿತು. 33 ವರ್ಷದ ಸೈಮಂಡ್ಸ್ 30 ನಿಮಿಷಗಳ ನಂತರ ಲಿಮೋ ಕಾರಿನಲ್ಲಿ ಬಿಳಿ ಉಡುಪಿನಲ್ಲಿ ಬಂದರು ಎಂದು ವರದಿಗಳು ತಿಳಿಸಿವೆ.
56ರ ವಯಸ್ಸಿನ ಜಾನ್ಸನ್ ಅವರು 2019 ರಲ್ಲಿ ಪ್ರಧಾನಿಯಾದ ನಂತರ ಡೌನಿಂಗ್ ಸ್ಟ್ರೀಟ್ ನಲ್ಲಿ ಸೈಮಂಡ್ಸ್ ಜೊತೆಗೆ ಸಹ ಜೀವನ ನಡೆಸುತ್ತಿದ್ದರು.
ಕಳೆದ ವರ್ಷ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿದ್ದರು. 2020 ರ ಎಪ್ರಿಲ್ ನಲ್ಲಿ ಸೈಮಂಡ್ಸ್ ಅವರು ಪುತ್ರ ವಿಲ್ಫ್ರೆಡ್ ಲಾರಿ ನಿಕೊಲಾಸ್ ಜಾನ್ಸನ್ ಗೆ ಜನ್ಮ ನೀಡಿದ್ದರು.







