ಭಾರತವೀಗ 10 ಪಟ್ಟು ಹೆಚ್ಚು ಮೆಡಿಕಲ್ ಆಕ್ಸಿಜನ್ ಉತ್ಪಾದಿಸುತ್ತಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಮೇ 30: ಕಳೆದ ಏಳು ವರ್ಷಗಳಲ್ಲಿ ತನ್ನ ಸರಕಾರದ ಸಾಧನೆಗಳ ಶ್ರೇಯಸ್ಸು ಇಡೀ ದೇಶಕ್ಕೆ ಹಾಗೂ ದೇಶದ ಪ್ರಜೆಗಳಿಗೆ ಸಲ್ಲಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ಪ್ರಧಾನಿಯಾಗಿ ತನ್ನ ಏಳು ವರ್ಷಗಳ ಆಡಳಿತ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರವಿವಾರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ನಾವು ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೇವೆ’ ಎಂದರು.
ಸ್ವಾತಂತ್ರ ದೊರೆತು 70 ವರ್ಷಗಳಾದ ಆನಂತರ ಕೊನೆಗೂ ತಮ್ಮ ಹಳ್ಳಿಗಳಿಗೆ ವಿದ್ಯುತ್ ಹಾಗೂ ರಸ್ತೆ ಸಂಪರ್ಕ ದೊರೆತಿರುವ ಬಗ್ಗೆ ಕೃತಜ್ಞತೆ ಅರ್ಪಿಸಿ ವಿವಿಧ ಸ್ಥಳಗಳಿಂದ ಹಲವಾರು ಮಂದಿ ತನಗೆ ಪತ್ರ ಬರೆದಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಿಳಿಸಿದ್ದಾರೆ. ತಾನು ಅಧಿಕಾರ ಸ್ವೀಕರಿಸಿದ ಆನಂತರದ ಏಳು ವರ್ಷಗಳಲ್ಲಿ ತನ್ನ ಸರಕಾರದ ಸಾಧನೆಗಳ ಪಟ್ಟಿ ಮಾಡಿದ ಅವರು ಇದರ ಶ್ರೇಯಸ್ಸು ದೇಶದ ಹಾಗೂ ದೇಶದ ಪ್ರಜೆಗಳಿಗೆ ಸಲ್ಲಬೇಕಾಗಿದೆ ಎಂದು ಹೇಳಿದ್ದಾರೆ.
‘‘ತಮ್ಮ ಪುತ್ರ, ಪುತ್ರಿಯರು ವಿದ್ಯುತ್ ದೀಪ ಹಾಗೂ ಫ್ಯಾನ್‌ಗಳ ಅಡಿಯಲ್ಲಿ ಕುಳಿತು ಅಧ್ಯಯನ ನಡೆಸಲು ಸಾಧ್ಯವಾಗುವಂತೆ ಮಾಡಿದ್ದಕ್ಕೆ ಧನ್ಯವಾದ ಆರ್ಪಿಸಿ ಹಲವಾರು ಮಂದಿ ಜನರು ದೇಶಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇನ್ನೂ ಹಲವಾರು ಮಂದಿ ‘ನಮ್ಮ ಗ್ರಾಮ ಕೂಡಾ ಉತ್ತಮ ರಸ್ತೆಯ ಮೂಲಕ ನಗರದ ಜೊತೆ ಸಂಪರ್ಕಿಸಲ್ಪಟ್ಟಿದೆ’ ಎಂದು ಹೇಳುತ್ತಿದ್ದಾರೆಂದು ಮೋದಿ ರೇಡಿಯೋ ಭಾಷಣದಲ್ಲಿ ತಿಳಿಸಿದರು.
‘‘ಕಳೆದ ಏಳು ವರ್ಷಗಳ ಸಾಧನೆಗಳು ದೇಶಕ್ಕೆ ಹಾಗೂ ಅದರ ಜನತೆಗೆ ಸೇರಿದ್ದಾಗಿದೆ. ನಾವೆಲ್ಲರೂ ಒಟ್ಟಾಗಿ, ರಾಷ್ಟ್ರೀಯ ಹೆಮ್ಮೆಯ ಹಲವಾರು ಕ್ಷಣಗಳನ್ನು ಅನುಭವಿಸಿದದ್ದೇವೆ ಎಂದು ಮೋದಿ ಹೇಳಿದರು.
ಭಾರತವು ಕಳೆದ ಏಳು ವರ್ಷಗಳಲ್ಲಿ ಡಿಜಿಟಲ್ ವಹಿವಾಟಿನಲ್ಲಿ ಹೊಸ ದಿಕ್ಕನ್ನು ಜಗತ್ತಿಗೆ ತೋರಿಸಿದೆ ಎಂದರು.
‘‘ಭಾರತವು, ಇತರ ದೇಶಗಳ ಅಭಿಪ್ರಾಯ ಮತ್ತು ಒತ್ತಡಗಳಿಗೆ ಮಣಿಯದೆ ತನ್ನದೇ ದಾರಿಯಲ್ಲಿ ಸಾಗುತ್ತಿರುವುದನ್ನು ಕಂಡು ನಮಗೆ ಹೆಮ್ಮೆಯಾಗುತ್ತಿದೆ. ಭಾರತವು ತನ್ನ ವಿರುದ್ಧ ಸಂಚು ಹೂಡಿದವರಿಗೆ ಪ್ರಬಲವಾದ ಉತ್ತರವನ್ನು ನೀಡಿದಾಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ’’ ಎಂದವರು ತಿಳಿಸಿದರು.
ಸಂವಿಧಾನದ 370ನೇ ವಿಧಿ ಹಾಗೂ ಅಯೋಧ್ಯಾದಂತಹ ಸುದೀರ್ಘ ಸಮಯದ ವಿವಾದಗಳನ್ನು ಪರಿಹರಿಸಿದಾಗ, ತನ್ನ ಭದ್ರತಾ ಹಿತಾಸಕ್ತಿಗಳ ಜೊತೆ ರಾಜಿ ಮಾಡಿಕೊಳ್ಳಲು ನಿರಾಕರಿಸಿದಾಗ ಹಾಗೂ ಅದರ ಪಡೆಗಳು ಬಲಿಷ್ಠಗೊಂಡಾಗ ತಾನು ಸರಿಯಾದ ದಾರಿಯಲ್ಲಿ ಸಾಗುತ್ತಿರುವ ಭಾವನೆ ದೇಶಕ್ಕೆ ಉಂಟಾಗಿದೆ ಎಂದವರು ಹೇಳಿದರು.
ಕೋವಿಡ್ ವಿರುದ್ಧ ಶಕ್ತಿಯುತ ಹೋರಾಟ: ಮೋದಿ
ಹೊಸದಿಲ್ಲಿ,ಮೇ 30: ಭಾರತವು ತನ್ನ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆಯೆಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವೈದ್ಯಕೀಯ ಆಕ್ಸಿಜನ್ ಸಾಗಾಟದಲ್ಲಿ ತೊಡಗಿರುವವರಿಂದ ಹಿಡಿದು ಲ್ಯಾಬ್ ಟೆಕ್ನಿಶಿಯನ್‌ವರೆಗೆ ವಿವಿಧ ಕೊರೋನ ವಾರಿಯರ್ಸ್ ಜೊತೆ ಸಂವಾದ ನಡೆಸಿದರು.
ಭಾರತವು ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿಯೇ ಚಂಡಮಾರುತ, ಭೂಕುಸಿತ ಹಾಗೂ ಭೂಕಂಪ ಸೇರಿದಂತೆ ಹಲವಾರು ಪ್ರಾಕೃತಿಕ ವಿಕೋಪಗಳನ್ನು ಎದುರಿಸಿದೆ. ಕೇಂದ್ರ, ರಾಜ್ಯಗಳು ಹಾಗೂ ಸ್ಥಳೀಯಾಡಳಿತವು ಒಗ್ಗೂಡಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಈ ಹಿಂದಿಗಿಂತ ಹೆಚ್ಚು ಜನರ ಪ್ರಾಣಗಳನ್ನು ರಕ್ಷಿಸಿದೆ ಎಂದು ಮೋದಿ ಹೇಳಿಕೊಂಡರು.
ಮನ್ ಕಿ ಬಾತ್ ಹೈಲೈಟ್ಸ್
*ಸ್ವಾತಂತ್ರ ದೊರೆತು ಏಳು ದಶಕಗಳಾದ ಬಳಿಕವೂ ಕೇವಲ3.5 ಕೋಟಿ ಗ್ರಾಮೀಣ ಮನೆಗಳಿಗೆ ಮಾತ್ರ ನಳ್ಳಿನೀರಿನ ಸಂಪರ್ಕವಿತ್ತು. ಆದಾಗ್ಯೂ ತನ್ನ ಆಡಳಿತದ ಕಳೆದ 21 ತಿಂಗಳುಗಳಲ್ಲಿ 4.5 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಳ್ಳಿನೀರಿನ ಸಂಪರ್ಕವನ್ನು ಒದಗಿಸಲಾಗಿದೆ.
*ದೇಶದಲ್ಲಿ ದಿನಂಪ್ರತಿ 9500 ಮಿಲಿಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವು ಉತ್ಪಾದನೆಯಾಗುತ್ತಿದ್ದು, ಇದು ಈ ಹಿಂದೆ ಉತ್ಪಾದನೆಯಾಗುತ್ತಿದ್ದುದಕ್ಕಿಂತ ಹತ್ತು ಪಟ್ಟು ಅಧಿಕವಾಗಿದೆ.
*ಕೊರೋನ ಸೋಂಕಿನ ಪ್ರತಿಕೂಲ ಪರಿಣಾಮಗಳಿಂದ ಕೃಷಿ ವಲಯ ಬಾಧಿತವಾಗದಂತೆ ಸಂರಕ್ಷಿಸಲಾಗಿದೆ.
*ರೈತರು ದಾಖಲೆ ಮಟ್ಟದ ಬೆಳೆಯನ್ನು ಉತ್ಪಾದಿಸಿದ್ದು ಸರಕಾರವು ದಾಖಲೆ ಪ್ರಮಾಣದಲ್ಲಿ ಅವುಗಳನ್ನು ಖರೀದಿಸಿದೆ.
*ಪ್ರತಿದಿನವೂ 20 ಲಕ್ಷ ಕೊರೋನ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ದೇಶದಲ್ಲೀಗ 2500ಕ್ಕೂ ಕೊರೋನ ಸೋಂಕು ಪರೀಕ್ಷಾ ಲ್ಯಾಬ್‌ಗಳಿವೆ.
► ಕೋವಿಡ್ ವಾರಿಯರ್ಸ್ ಜೊತೆ ಪ್ರಧಾನಿ ಸಂವಾದ
ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿರುವ ವಿವಿಧ ಜನರೊಂದಿಗೆ ಮೋದಿ ಮನ್ ಕಿ ಬಾತ್‌ನಲ್ಲಿ ನೇರ ಸಂವಾದ ನಡೆಸಿದರು. ಆಕ್ಸಿಜನ್ ಟ್ಯಾಂಕರ್‌ಗಳ ಚಾಲಕ ದಿನೇಶ್ ಉಪಾಧ್ಯಾಯ, ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿನ ಚಾಲಕಿ ಶಿರಿಶಾ ಗಜನಿ ಹಾಗೂ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಜೊತೆ ನೇರವಾಗಿ ಮಾತನಾಡಿದ ಅವರು, ದೇಶಕ್ಕೆ ಅವರು ಸಲ್ಲಿಸುತ್ತಿರುವ ಸೇವೆಯನ್ನು ಕೊಂಡಾಡಿದರು. ಲ್ಯಾಬ್ ಟೆಕ್ನಿಶಿಯನ್ ಪ್ರಕಾಶ್ ಕಂದ್‌ಪಾಲ್ ಜೊತೆಗೂ ಮಾತನಾಡಿ ಅವರ ಅನುಭವಗಳನ್ನು ದೇಶದ ಜನತೆಯ ಜೊತೆ ಹಂಚಿಕೊಂಡರು.
ಮಾಸ್ಕ್‌ಗಳನ್ನು ಧರಿಸುವ ಮೂಲಕ, ಸುರಕ್ಷಿತ ಅಂತರವನ್ನು ಕಾಪಾಡುವ ಮೂಲಕ ಕೋವಿಡ್19 ವಿರುದ್ಧ ಹೋರಾಟದಲ್ಲಿ ಕೈಜೋಡಿಸುವಂತೆಯೂ ಪ್ರಧಾನಿ ದೇಶದಜನತೆಗೆ ಮನವಿ ಮಾಡಿದರು.