''ಮೋಜು ಮಸ್ತಿ ಮಾಡಲು ಸ್ವಿಮ್ಮಿಂಗ್ ಫೂಲ್ ಕಟ್ಟಿಸಿಕೊಂಡವರಿಂದ ನೀತಿ ಪಾಠ ಕಲಿಯಬೇಕಿಲ್ಲ''
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು, ಮೇ 30: ಕೊರೋನ ಬಂದು ಜನ ಸಂಕಷ್ಟಪಡುತ್ತಿರುವಾಗ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎನ್ನುತ್ತಿರಬೇಕಾದರೆ ಮೋಜು ಮಸ್ತಿ ಮಾಡಲು ಸ್ವಿಮ್ಮಿಂಗ್ ಫೂಲ್ ಕಟ್ಟಿಸಿಕೊಂಡಿರುವವರಿಂದ ನೀತಿ ಪಾಠ ಕಲಿಯಬೇಕಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಸ್ವಂತ ಹಿತಾಸಕ್ತಿಗಾಗಿ ಮೋಜು ಮಸ್ತಿಮಾಡಲು 28 ಲಕ್ಷ ರೂ. ಖರ್ಚು ಮಾಡಿ ಸ್ವಿಂಗ್ ಫೋಲ್ ಕಟ್ಟಿಸುವ ಅಗತ್ಯವಿತ್ತೆ. ಇಂತವರಿಂದ ಜನಪ್ರತಿನಿಧಿಗಳಾದ ನಾವು ಪಾಠ ಕಲಿಯಬೇಕಿಲ್ಲ ಎಂದರು.
ಪಿಎಂ ಕೇರ್ಸ್ ನಿಂದ 1 ಲಕ್ಷ ವೆಂಟಿಲೇಟರ್ ನೀಡಲಾಗಿದೆ. ಮೈಸೂರಿಗೂ ವಟಿಲೇಟರ್ ಗಳು ಬಂದಿದೆ ಅದನ್ನು ಇನ್ನೂ ಅಳವಡಿಸಿಲ್ಲ, ಇದನ್ನು ಮಾಡಿಸಬೇಕಾದದ್ದು ಯಾರ ಕೆಲಸ ಎಂದು ಪ್ರಶ್ನಿಸಿದರು.
ಸ್ಟೆಪ್ ಡೌನ್ ಆಸ್ಪತ್ರೆಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ನಾಯಿ ಕೊಡೆಗಳಂತೆ ತಲೆ ಎತ್ತಿದ್ದವು. ಶಾಸಕ ರಾಮದಾಸ್ ಅವರು ಅಲ್ಲಿಗೆ ಹೋಗಿ ನಿಯಮ ಉಲ್ಲಂಘನೆ ಮಾಡಿರುವುದನ್ನು ಪತ್ತೆ ಹಚ್ಚಿದ್ದರು. ಈ ಆಸ್ಪತ್ರೆಗಳಿಗೆ ಯಾವ ಹಿತಾಸಕ್ತಿ ಮೇಲೆ ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿದ್ದರು. ಇದರಲ್ಲಿ ಬೇರೆ ಏನಾದರು ಅನುಕೂಲ ಇತ್ತೆ ಎಂದು ಅನುಮಾನ ವ್ಯಕ್ತಪಡಿಸಿದರು.
ಕೊರೋನ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಹಣ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ. ಸೋಮಶೇಖರ್ 41 ಕೋಟಿ ತಂದಿದ್ದರು. ಅದರಲ್ಲಿ 39 ಕೋಟಿ ರೂ. ಖರ್ಚಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಜೊತೆಗೆ ದಾನಿಗಳು ಕೆಲವು ಸಂಘ ಸಂಸ್ಥೆಗಳವರು ಸಾಕಷ್ಟು ಹಣ ನೀಡಿದ್ದಾರೆ. ಹಾಗಿದ್ದ ಮೇಲೆ ಆ ಹಣ ಏಕೆ ಖರ್ಚಾಯಿತು? ಜಿಲ್ಲೆಗೆ 39 ಕೋಟಿಯನ್ನು ಯಾತಕ್ಕೆ ಖರ್ಚು ಮಾಡಲಾಗಿದೆ ಎಂದು ಸಾರ್ವಜನಿಕವಾಗಿ ಲೆಕ್ಕಕೊಡಲಿ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಪ್ರತಿಯೊಂದಕ್ಕು ಟೆಂಡರ್, ನಿಯಮ ಎಂದು ಹೇಳುವ ಜಿಲ್ಲಾಧಿಕಾರಿಗಳು ತಮ್ಮ ಮನೆಯ ಆವರಣದಲ್ಲಿ ಸ್ವಿಮ್ಮಿಂಗ್ ಫೋಲ್ ಕಟ್ಟಿಸಲು ಮಹಾನಗರ ಪಾಲಿಕೆ ಅನುಮತಿ ಪಡೆದಿದ್ದಾರ ? ಇಲ್ಲ ಪಾರಂಪರಿಕ ಕಟ್ಟಡದ ತಜ್ಞರ ಅಭಿಪ್ರಾಯ ಪಡೆದಿದ್ದಾರ ಎಂದು ಪ್ರಶ್ನಿಸಿದರು.







