ಇನ್ನೆರಡು ದಿನಗಳಲ್ಲಿ ಎರಡನೇ ಹಂತದ ಪ್ಯಾಕೇಜ್ ಘೋಷಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಮೇ 30: `ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಇನ್ನೆರಡು ದಿನಗಳಲ್ಲಿ ಎರಡನೆ ಹಂತದ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಏಳು ವರ್ಷಗಳನ್ನು ಪೂರೈಸಿರುವ ಸಂದರ್ಭವನ್ನು ಸೇವಾ ಕಾರ್ಯಗಳ ಮೂಲಕ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಿದ ಬಳಿಕ ಮಾತನಾಡಿದ ಅವರು, ಎರಡನೇ ಪ್ಯಾಕೇಜ್ ಕುರಿತು ಸಿದ್ಧತೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಕೋವಿಡ್ ಲಾಕ್‍ಡೌನ್ ಜೂನ್ 5 ಅಥವಾ 6ರ ವೇಳೆಗೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ. ತಜ್ಞರು ಮತ್ತು ಸಂಪುಟ ಸಚಿವರ ಜತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದ ಯಡಿಯೂರಪ್ಪ, ರಾಜ್ಯದಲ್ಲಿನ ಇನ್ನೂ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣ ಜಾಸ್ತಿಯೇ ಇದೆ. ಲಾಕ್‍ಡೌನ್ ವಿಸ್ತರಣೆ ಮಾಡಿ ಎಂದು ತಜ್ಞರು ಸದ್ಯ ಯಾವುದೇ ವರದಿ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಾರ್ವಜನಿಕರು ಮಾರ್ಗಸೂಚಿ ಪಾಲಿಸಿ ಸೋಂಕು ತಡೆಗಟ್ಟಲು ಸರಕಾರದೊಂದಿಗೆ ಸಹಕರಿಸಿದರೆ ಕೋವಿಡ್ ಲಾಕ್‍ಡೌನ್ ವಿಸ್ತರಿಸುವ ಅಗತ್ಯವೇ ಇಲ್ಲ. ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಾಧಕ-ಬಾಧಕಗಳನ್ನು ಪರಿಶೀಲಿಸಿ, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಜೂನ್ 5 ಅಥವಾ 6ರ ವೇಳೆಗೆ ಲಾಕ್‍ಡೌನ್ ವಿಸ್ತರಣೆ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.







