ಪ್ರಧಾನಿ ಮೋದಿಯ ಯೋಜನೆಗಳು ಜನರ ಮನೆ ಬಾಗಿಲು ತಲುಪುತ್ತಿವೆ: ನಳೀನ್ ಕುಮಾರ್

ಮಂಗಳೂರು, ಮೇ 30: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರಪಂಚದ ಎಲ್ಲಾ ದೇಶಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಬೆಳೆಸಿಕೊಂಡಿದೆ. ಮೋದಿಯ ಪ್ರತಿಯೊಂದು ಯೋಜನೆಗಳು ಕೂಡ ಜನರ ಮನೆ ಬಾಗಿಲಿಗೆ ತಲುಪುತ್ತಿವೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮೋದಿ ಸರಕಾರಕ್ಕೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಸೇವೆಯೇ ಸಂಘಟನೆ’ ಕಾರ್ಯಕ್ರಮದ ಅಂಗವಾಗಿ ರವಿವಾರ ನಗರದ ಮಣ್ಣಗುಡ್ಡೆಯ ಗಾಂಧಿ ಪಾರ್ಕ್‌ನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಹಾಗೂ ಮಣ್ಣಗುಡ್ಡೆ ಗಾಂಧಿನಗರ ಸರಕಾರಿ ಶಾಲೆಯಲ್ಲಿ ನಡೆದ ಆಶಾ ಕಾರ್ಯಕತೆಯರಿಗೆ ಕಿಟ್ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊರೋನ ಸಂಕಷ್ಟ ಕಾಲವನ್ನು ಭಾರತ ಅತ್ಯಂತ ಸಮರ್ಪಕವಾಗಿ ಎದುರಿಸುತ್ತಿದೆ. ಕಳೆದ 6 ತಿಂಗಳಿನಲ್ಲಿ 20 ಕೋಟಿ ಮಂದಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಇತರ ದೇಶಗಳಿಗೆ ಪಿಪಿಇ ಕಿಟ್ ಸಹಿತ ಅಗತ್ಯ ವಸ್ತುಗಳ ಪೂರೈಕೆ ಮಾಡಿದೆ. ಕೊರೋನ ಮೊದಲ ಅಲೆಯ ಸಂದರ್ಭ ರಾಜ್ಯದಲ್ಲಿ 1.68 ಕೋಟಿ ಕುಟುಂಬಗಳಿಗೆ ಆಹಾರ ವಿತರಣೆ ಮಾಡಲಾಗಿದೆ. 68 ಲಕ್ಷ ಕುಟುಂಬಗಳಿಗೆ ನಿರಂತರ 5 ತಿಂಗಳ ಕಾಲ ಆಹಾರ ಪೊಟ್ಟಣ ವಿತರಿಸಲಾಗಿದೆ. 3.5 ಲಕ್ಷ ಕುಟುಂಬಗಳಿಗೆ ಔಷಧವನ್ನು ನೀಡಲಾಗಿದೆ. 2ನೇ ಅಲೆಯ ಸಂದರ್ಭವೂ ಈ ಸೇವೆ ಮುಂದುವರಿದೆ ಎಂದರು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕಾರ್ಪೊರೇಟರ್‌ಗಳಾದ ಗಣೇಶ್ ಕುಲಾಲ್, ಸಂಧ್ಯಾ ಮೋಹನ ಆಚಾರ್ಯ, ಜಯಶ್ರೀ ಕುಡ್ವ, ಜಯಲಕ್ಷ್ಮೀ ಶೆಟ್ಟಿ, ಬಿಜೆಪಿ ವಕ್ತಾರ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.







.jpeg)


