"ಬಿಜೆಪಿ ನಾಯಕರು, ಕಾರ್ಯಕರ್ತರು ಕೋವಿಡ್ ಪರಿಹಾರ ಕಾರ್ಯ ನಡೆಸುತ್ತಿದ್ದರೆ, ವಿರೋಧ ಪಕ್ಷಗಳು ಕ್ವಾರಂಟೈನ್ ನಲ್ಲಿವೆ"
ಜೆ.ಪಿ ನಡ್ಡಾ ಹೇಳಿಕೆ

ಹೊಸದಿಲ್ಲಿ: "ಕೊರೋನ ವೈರಸ್ ಸಾಂಕ್ರಾಮಿಕದ ನಡುವೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರೆ, ವಿರೋಧ ಪಕ್ಷಗಳೆಲ್ಲವೂ ಕ್ವಾರಂಟೈನ್ ನಲ್ಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆ ನೀಡಿದ್ದಾರೆ. ಆನ್ ಲೈನ್ ಮೂಲಕ ನರೇಂದ್ರ ಮೋದಿ ಸರಕಾರ ಏಳು ವರ್ಷ ಪೂರೈಸಿದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
"ಇದೀಗ ಅವರು ಲಸಿಕೆಗಾಗಿ ಗೋಗರೆಯುತ್ತಿದ್ದಾರೆ. ಅಂದು ಅವರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದರು. ಇಂದು ಲಸಿಕೆಗಾಗಿ ಬೊಬ್ಬಿರಿಯುತ್ತಿದ್ದಾರೆ. 2 ಕಂಪೆನಿಗಳ ಬದಲು ಈಗ 13 ಕಂಪೆನಿಗಳು ಲಸಿಕೆ ತಯಾರಿಕೆ ಮಾಡುತ್ತಿವೆ. ಶೀಘ್ರದಲ್ಲೇ ಅದರ ಸಂಖ್ಯೆ 19 ಆಗಲಿದೆ. ಅಕ್ಟೋಬರ್ ವೇಳೆಗೆ ಭಾರತ್ ಬಯೋಟೆಕ್ ತಿಂಗಳಿಗೆ 10 ಕೋಟಿ ಲಸಿಕೆ ಉತ್ಪಾದನೆ ಮಾಡಲಿದೆ" ಎಂದು ಅವರು ಹೇಳಿದರು.
ಒಂದು ಲಕ್ಷ ಗ್ರಾಮಗಳು ಮತ್ತು ಕುಗ್ರಾಮಗಳಲ್ಲಿನ ಬಿಜೆಪಿ ಕಾರ್ಯಕರ್ತರು ಸರಕಾರ ಏಳು ವರ್ಷ ಪೂರೈಸಿದ ಈ ಸಂದರ್ಭವನ್ನು ಗುರುತಿಸಲು ಅಗತ್ಯವಿರುವವರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ ಅವರು, "ಏಳು ವರ್ಷಗಳು ಪೂರೈಸಿದ ಈ ಸಂದರ್ಭವನ್ನು ʼಸೇವಾ ದಿವಸ್ʼ ಎಂದು ನಾವು ಆಚರಿಸಬೇಕು. ನಮ್ಮ ಕಾರ್ಮಿಕರು ಒಂದು ಲಕ್ಷ ಗ್ರಾಮದೊಂದಿಗೆ ಸಂಪರ್ಕ ಹೊಂದಿದ್ದಾರೆ" ಎಂದು ಹೇಳಿದರು.