ಪ.ಬಂಗಾಳ ಮುಖ್ಯ ಕಾರ್ಯದರ್ಶಿಯ ಎತ್ತಂಗಡಿ ಬಳಿಕ ಮುಂದೇನು ಕಾದಿದೆ?
ತಾರಕಕ್ಕೇರಿದ ಕೇಂದ್ರ-ಮಮತಾ ನಡುವಿನ ಕಾಳಗ

Photo: Twitter
ಕೋಲ್ಕತಾ,ಮೇ 30: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಯಾಸ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಸಂಭವಿಸಿರುವ ಹಾನಿಯ ಪರಿಶೀಲನೆಗಾಗಿ ಕಲಾಯಿಕುಂದಾ ವಾಯುನೆಲೆಯಲ್ಲಿ ನಡೆದ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಗೈರುಹಾಜರಿಯ ಬಳಿಕ ಅವರ ಮತ್ತು ಕೇಂದ್ರದ ನಡುವಿನ ಕಾಳಗ ಇನ್ನಷ್ಟು ತೀವ್ರಗೊಂಡಿದೆ.
ಶುಕ್ರವಾರ ರಾತ್ರಿಯೇ ಪ.ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂದೋಪಾಧ್ಯಾಯ ಅವರನ್ನು ವಾಪಸ್ ಕರೆಸಿಕೊಂಡಿರುವ ಕೇಂದ್ರವು ಮೇ 31ರಂದು ದಿಲ್ಲಿಯ ನಾರ್ಥ್ ಬ್ಲಾಕ್ ನಲ್ಲಿರುವ ಸಿಬ್ಬಂದಿ ತರಬೇತಿ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸುವ ಮೂಲಕ ಬ್ಯಾನರ್ಜಿಯವರಿಗೆ ಬಲವಾದ ಆಘಾತವನ್ನು ನೀಡಿದೆ.
ವಿಪರ್ಯಾಸವೆಂದರೆ ಮೇ 31ರಂದು ಸೇವೆಯಿಂದ ನಿವೃತ್ತರಾಗಲಿದ್ದ 1987ರ ತಂಡದ ಐಎಎಸ್ ಅಧಿಕಾರಿಯಾಗಿರುವ ಬಂದೋಪಾಧ್ಯಾಯ ಅವರಿಗೆ ರಾಜ್ಯದ ಮನವಿಯ ಮೇರೆಗೆ ಈಗಷ್ಟೇ ಮೂರು ತಿಂಗಳ ಸೇವಾ ವಿಸ್ತರಣೆಯನ್ನು ನೀಡಲಾಗಿತ್ತು. ಬ್ಯಾನರ್ಜಿಯವರಿಗೆ ನಿಕಟವಾಗಿದ್ದಾರೆ ಎನ್ನಲಾಗಿರುವ ಬಂದೋಪಾಧ್ಯಾಯ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ನೇತೃತ್ವ ವಹಿಸಿದ್ದರು. ಅವರು ಯಾಸ್ ಚಂಡಮಾರುತದ ಪರಿಹಾರ ಮತ್ತು ಪುನರ್ನಿರ್ಮಾಣಕ್ಕಾಗಿ ರೂಪಿಸಲಾಗಿರುವ ವಿವಿಧ ಕಾರ್ಯಪಡೆಗಳ ಮುಖ್ಯಸ್ಥರೂ ಆಗಿದ್ದಾರೆ.
ಬಂದೋಪಾಧ್ಯಾಯ ಅವರು ಕಲಾಯಿಕುಂದದಲ್ಲಿ ಪರಿಶೀಲನಾ ಸಭೆಗೆ ಹಾಜರಾಗಿರದಿದ್ದರೂ ಬ್ಯಾನರ್ಜಿಯವರೊಂದಿಗೆ ಪ್ರತ್ಯೇಕವಾಗಿ ಮೋದಿಯವರನ್ನು ಭೇಟಿಯಾಗಿದ್ದರಿಂದ ಚಂಡಮಾರುತದ ನಂತರದ ಆಡಳಿತದ ಕಾರ್ಯಾಚರಣೆಗಳಲ್ಲಿ ಅವರು ಪ್ರಮುಖ ಪಾತ್ರವನ್ನು ಹೊಂದಿದ್ದಾರೆ ಎನ್ನುವುದು ಪ್ರಧಾನಿಗೆ ಗೊತ್ತಿರಲೇಬೇಕು.
ಮೋದಿಯವರು ಸಂಪುಟದ ನೇಮಕಾತಿ ಸಮಿತಿಯ ಅಧ್ಯಕ್ಷರೂ ಆಗಿರುವುದರಿಂದ ಚಂಡಮಾರುತ ಪರಿಹಾರದ ಕುರಿತು ಬಂದೋಪಾಧ್ಯಾಯರೊಂದಿಗೆ ಚರ್ಚೆಯ ಬೆನ್ನಿಗೇ ಸಮಿತಿಯ ಮೂಲಕ ಅವರ ವರ್ಗಾವಣೆಯನ್ನು ಮಾಡಿಸಿರುವುದು ವ್ಯಂಗ್ಯವೇ ಸರಿ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಂದೋಪಾಧ್ಯಾಯರ ವರ್ಗಾವಣೆ ಆದೇಶಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ಬಂಗಾಳದಲ್ಲಿಯ ಸೋಲನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಕೇಂದ್ರದ ಈ ಕ್ರಮವು ಸೇಡಿನ ರಾಜಕಾರಣದ ಹೊಸ ಮೈಲಿಗಲ್ಲಾಗಲಿದೆ. ರಾಜ್ಯವು ಕೋವಿಡ್ ಮತ್ತು ಚಂಡಮಾರುತದ ವಿರುದ್ಧ ಹೋರಾಡುತ್ತಿರುವಾಗಲೇ ಈಗಷ್ಟೇ ವಿಸ್ತರಣೆಯನ್ನು ಪಡೆದಿದ್ದ ಮುಖ್ಯ ಕಾರ್ಯದರ್ಶಿಗಳನ್ನು ಕೇಂದ್ರವು ಎತ್ತಂಗಡಿ ಮಾಡಿದೆ. ಈ ಬಿಜೆಪಿಯು ಬಂಗಾಳದ ಶತ್ರುವಾಗಿದೆ ಎಂದರು.
ಪ.ಬಂಗಾಳ ವಿಧಾನಸಭಾ ಚುನಾವಣೆಗಳ ಬಳಿಕ ಕೇಂದ್ರವು ತೆಗೆದುಕೊಂಡಿರುವ ಸರಣಿ ಕ್ರಮಗಳನ್ನು ಪರಿಗಣಿಸಿದರೆ ಬಿಜೆಪಿಯು ಈಗ ತನ್ನ ಸೋಲಿಗಾಗಿ ಸೇಡು ತೀರಿಸಿಕೊಳ್ಳಲು ದೃಢನಿರ್ಣಯವನ್ನು ಮಾಡಿದೆ ಎಂದು ಟಿಎಂಸಿ ಅಭಿಪ್ರಾಯಿಸಿದೆ.
ಚುನಾವಣಾ ಫಲಿತಾಂಶಗಳ ಬೆನ್ನಿಗೇ ರಾಜ್ಯದಲ್ಲಿ ನಡೆದಿದ್ದ ರಾಜಕೀಯ ಹಿಂಸಾಚಾರಕ್ಕೆ ಕೋಮುಬಣ್ಣ ನೀಡಿದ್ದು,ನಾರದ ಪ್ರಕರಣದಲ್ಲಿ ಸಿಬಿಐ ಮೂಲಕ ರಾಜ್ಯದ ಇಬ್ಬರು ಸಚಿವರು ಸೇರಿದಂತೆ ನಾಲ್ವರು ಟಿಎಂಸಿ ನಾಯಕರ ಬಂಧನ ಇವು ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ ಎಂದು ಟಿಎಂಸಿ ಬೆಟ್ಟು ಮಾಡಿದೆ.
ಕೃಪೆ: Thewire.in