ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿ: ಗೋವಿಂದ ಕಾರಜೋಳ

ಬಾಗಲಕೋಟೆ, ಮೇ 30: ಸಿಎಂ ಬಿಎಸ್‍ವೈ ಬದಲಾವಣೆ ವಿಷಯ ಮಾಧ್ಯಮಗಳಲ್ಲಿ ಬಂದಿದ್ದು, ಇದಕ್ಕೆ ಮತ್ತಷ್ಟು ರೆಕ್ಕೆ-ಪುಕ್ಕ ಹಚ್ಚಲಾಗುತ್ತಿದೆ. ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತಂತೆ ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಇರುತ್ತಾರೆ. ಅವರ ಬದಲಾವಣೆ ಗಾಳಿ ಸುದ್ದಿ ಅಷ್ಟೇ. ಮಾದ್ಯಮಗಳಿಂದ ಗಾಳಿ ಸುದ್ದಿಗೆ ರೆಕ್ಕೆ-ಪುಕ್ಕ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಕೊರೋನ ಸಂಕಷ್ಟದಲ್ಲಿ, ಪ್ರಕೃತಿ ವಿಕೋಪದಲ್ಲಿ ಯಡಿಯೂರಪ್ಪ ಸರಕಾರ ಅತ್ಯುತ್ತಮ ಕೆಲಸ ಮಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿ. ನಮ್ಮ ಮುಖ್ಯಮಂತ್ರಿಗಳು ಕೊರೋನ ಸಂಕಷ್ಟದಲ್ಲಿ ಅನೇಕ ನೆರವು ನೀಡಿದ್ದಾರೆ. ಸದ್ಯ ಆರ್ಥಿಕ ಸಂಕಷ್ಟದಲ್ಲೂ ನೆರವು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ಕಾಯಿಸಿದ್ದು ಖಂಡನೀಯ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ಗೋವಿಂದ ಕಾರಜೋಳ, `ಪ್ರಧಾನಿ ಮೋದಿ ಪ್ರಕೃತಿ ವಿಕೋಪ ವೀಕ್ಷಣೆಗೆ ಎಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಪ್ರಧಾನಿಗಳನ್ನು ಅರ್ಧ ಗಂಟೆ ಕಾಯಿಸಿದ್ದು ಖಂಡನೀಯ. ಮಮತಾ ಬ್ಯಾನರ್ಜಿಯವರಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ. ದೇಶದ ಪ್ರೊಟೊಕಾಲ್ ಏನು?, ರಾಷ್ಟ್ರಪತಿಗಳು, ಉಪ ರಾಷ್ಟ್ರಪತಿಗಳು, ಪ್ರಧಾನಿಗಳು ಬಂದಾಗ ಆಯಾ ರಾಜ್ಯದ ಸಿಎಂ ಅವರನ್ನು ಸ್ವಾಗತಿಸಬೇಕಾಗುತ್ತದೆ ಎಂದರು.







