ಮೋದಿ ಸರಕಾರಕ್ಕೆ ಏಳು ವರ್ಷ: ಡಿಸಿಎಂ ಡಾ.ಅಶ್ವತ್ಥನಾರಾಯಣರಿಂದ ಬೆಂಗಳೂರು ನಗರ ಪ್ರದಕ್ಷಿಣೆ
ಬೆಂಗಳೂರು, ಮೇ 30: ಪ್ರಧಾನಮಂತ್ರಿ ಮೋದಿ ನೇತೃತ್ವದ ಸರಕಾರಕ್ಕೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ರವಿವಾರ ಬೆಳಗ್ಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರವೂ ಸೇರಿ ನಗರದ ವಿವಿಧೆಡೆ ಸಂಚರಿಸಿ ಪಕ್ಷದ ಕಾರ್ಯಕರ್ತರು, ಕೋವಿಡ್ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿಯನ್ನು ಭೇಟಿ ಮಾಡಿದರು.
ಮೊದಲಿಗೆ ಅರಮನೆ ನಗರ ವಾರ್ಡ್ ಆರ್‍ಎಂವಿ ಬಡಾವಣೆ ನಿವಾಸಿಗಳ ಸಂಘದ ಪಾರ್ಕ್‍ನಲ್ಲಿ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪಾಲ್ಗೊಂಡ ಅವರು, ಅಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ಗುಂಪಿನ ಜನಕ್ಕೆ ನೀಡಲಾಗುತ್ತಿದ್ದ ಲಸಿಕೆ ಮಾಹಿತಿಯನ್ನು ಪಡೆದುಕೊಂಡರು.
ವೈದ್ಯರು, ಸಿಬ್ಬಂದಿ ಹಾಗೂ ಲಸಿಕೆ ಪಡೆಯಲು ಬಂದಿದ್ದ ಹಿರಿಯ ನಾಗರೀಕರ ಯೋಗಕ್ಷೇಮ ವಿಚಾರಿಸಿದರು, ಈ ಸಂದರ್ಭದಲ್ಲಿ ಸರಕಾರದ ಕೋವಿಡ್ ನಿರ್ವಹಣೆ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಟ್ಟಹಳ್ಳಿ ವಾರ್ಡ್ ನಲ್ಲಿ ಬಡವರು, ಮುಂಚೂಣಿ ಕಾರ್ಯಕರ್ತರಾದ ಪೌರ ಕಾರ್ಮಿಕರು, ಬೆಸ್ಕಾಂ ಮತ್ತು ಒಳಚರಂಡಿ ಮತ್ತು ಜಲಮಂಡಳಿ ಕಾರ್ಮಿಕರಿಗೆ ಆಹಾರ ದಾನ್ಯದ ಕಿಟ್‍ಗಳನ್ನು ವಿತರಿಸಿದರು. ಬಳಿಕ ಕಾಡುಮಲ್ಲೇಶ್ವರ ವಾರ್ಡ್ ನ ಸಮುದಾಯ ಭವನದಲ್ಲಿ ವ್ಯಾಕ್ಸಿನ್ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.
ಸಿಹಿ, ಫುಡ್ ಕಿಟ್ ಹಂಚಿಕೆ: ಮೋದಿ ಸರಕಾರಕ್ಕೆ 7 ವರ್ಷ ತುಂಬಿದ ಕಾರಣ ಎಲ್ಲ ಕಡೆಗಳಲ್ಲೂ ಲಸಿಕೆ ಪಡೆಯಲು ಬಂದು ಸಾಲಿನಲ್ಲಿ ನಿಂತಿದ್ದವರಿಗೆ ಡಿಸಿಎಂ ಸ್ವತಃ ಸಿಹಿ ಹಂಚಿದರು. ಅದೇ ರೀತಿ ಎಂಎಸ್‍ಆರ್ ನಗರದಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್‍ಗಳು ಮತ್ತು ಪ್ರೆಶರ್ ಕುಕ್ಕರ್ ಗಳನ್ನು ವಿತರಣೆ ಮಾಡಿದರು. ಅಲ್ಲದೆ, ಪೌರ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿದರು. ಮಾಜಿ ಶಾಸಕ ಮುನಿರಾಜು ಅವರೊಂದಿಗೆ ದಾಸರಹಳ್ಳಿ ಪಿಎಚ್‍ಸಿಗೆ ಭೇಟಿ ನೀಡಿ, ಅಲ್ಲಿನ ಆಶಾ ಕಾರ್ಯಕರ್ತೆಯರು, ಅರೆ ವೈದ್ಯ ಸಿಬ್ಬಂದಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ದಾಸರಹಳ್ಳಿ ಮಂಡಲ ವಿಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಒಡೆದಾಳುವ ರಾಜಕೀಯ ಮಾಡಿಕೊಂಡು ದೇಶದ ಹಿತವನ್ನು ಕಡೆಗಣಿಸಿದವು. ಕೋವಿಡ್‍ನಂಥ ಸಂಕಷ್ಟ ಕಾಲದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರ ನಡೆಸಿದವು ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟುವಾಗಿ ಟೀಕಿಸಿದರು.
ಮೊದಲ ಹಂತದಲ್ಲಿ ಲಸಿಕೆ ನೀಡಲು ಆರಂಭಿಸಿದಾಗ ಕಾಂಗ್ರೆಸ್ ಮತ್ತಿತರೆ ಪ್ರತಿಪಕ್ಷಗಳು ದೊಡ್ಡ ಗೊಂದಲವನ್ನೇ ಸೃಷ್ಟಿ ಮಾಡಿದವು. ಅಪಪ್ರಚಾರ ನಡೆಸಿದವು. ಈಗ ಲಸಿಕೆ ಸಿಗುತ್ತಿಲ್ಲ ಎಂದು ಹುಯಿಲೆಬ್ಬಿಸುತ್ತಿವೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಮುನಿರಾಜು, ಪಕ್ಷದ ಮಂಡಲಾಧ್ಯಕ್ಷ ಲೋಕೇಶ್, ಅರಮನೆ ನಗರ ವಾರ್ಡಿನ ಬಿಬಿಎಂಪಿ ಮಾಜಿ ಸದಸ್ಯೆ ಸುಮಂಗಲ ಕೇಶವ್, ಬಿಬಿಎಂಪಿ ಮಾಜಿ ಸದಸ್ಯ ಜಯಪ್ರಕಾಶ್, ಅದೇ ವಾರ್ಡಿನ ಪಕ್ಷದ ಅಧ್ಯಕ್ಷ ಪ್ರೇಮ್ ಕುಮಾರ್ ಹಾಜರಿದ್ದರು.







