ಉಡುಪಿ: ಕೊರೋನಕ್ಕೆ 4 ಬಲಿ; 652 ಮಂದಿಗೆ ಕೋವಿಡ್ ಪಾಸಿಟಿವ್
ದಿನದಲ್ಲಿ 1081 ಮಂದಿ ಸೋಂಕಿನಿಂದ ಗುಣಮುಖ

ಉಡುಪಿ, ಮೇ 30: ಜಿಲ್ಲೆಯಲ್ಲಿ ರವಿವಾರ ನಾಲ್ವರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 329ಕ್ಕೇರಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 652 ಮಂದಿ ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದು, 1081 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 5342 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಮೃತಪಟ್ಟ ನಾಲ್ವರಲ್ಲಿ ತಲಾ ಇಬ್ಬರು ಪುರುಷರು (68, 56ವರ್ಷ) ಹಾಗೂ ಮಹಿಳೆಯರು (86, 80). ಮೂವರು ಕುಂದಾಪುರ ತಾಲೂಕಿನವರಾದರೆ, ಒಬ್ಬರು ಉಡುಪಿಯವರು. ಜಿಲ್ಲೆಯ ಗ್ರಾಮೀಣ ಪ್ರದೇಶ ಗಳಾದ ಮಲ್ಪೆಯ ತೊಟ್ಟಂ, ಕಿರಿಮಂಜೇಶ್ವರ, ಬಳ್ಕೂರು ಹಾಗೂ ಹೊಸೂರು ಆಲೂರಿನವರಾದ ಇವರು ಕೊರೋನ ರೋಗಲಕ್ಷಣದೊಂದಿಗೆ ಗಂಭೀರ ಉಸಿರಾಟದ ತೊಂದರೆ, ನ್ಯುಮೋನಿಯಾದ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಶನಿವಾರ ಪಾಸಿಟಿವ್ ಬಂದ 652 ಮಂದಿಯಲ್ಲಿ 321 ಮಂದಿ ಪುರುಷರು ಹಾಗೂ 331 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 355, ಕುಂದಾಪುರ ತಾಲೂಕಿನ 165 ಹಾಗೂ ಕಾರ್ಕಳ ತಾಲೂಕಿನ 130 ಮಂದಿ ಇದ್ದು, ಉಳಿದ ಇಬ್ಬರು ಹೊರಜಿಲ್ಲೆಯವರು. ಇವರಲ್ಲಿ 22 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 630 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಶನಿವಾರ ಒಟ್ಟು 1081 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 52,537ಕ್ಕೇರಿದೆ. ನಿನ್ನೆ ಜಿಲ್ಲೆಯ 3241 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 58,208 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,89,590 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
180 ಮಂದಿಗೆ ಲಸಿಕೆ: ರವಿವಾರ ಜಿಲ್ಲೆಯಲ್ಲಿ ಒಟ್ಟು 180 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 18ರಿಂದ 44 ವರ್ಷ ದೊಳಗಿನ 41 ಮಂದಿ ಮೊದಲ ಡೋಸ್ ಪಡೆದರೆ, 45 ವರ್ಷ ಮೇಲಿನ 139 ಮಂದಿ ಲಸಿಕೆ ಸ್ವೀಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







