ದೊರೆಸ್ವಾಮಿ ಅವರದ್ದು ಕಳಂಕ ರಹಿತ ಹೋರಾಟದ ಬದುಕು: ಗೊ.ರು.ಚನ್ನಬಸಪ್ಪ
ಎಚ್.ಎಸ್.ದೊರೆಸ್ವಾಮಿ ನುಡಿನಮನ ಕಾರ್ಯಕ್ರಮ

ಬೆಂಗಳೂರು, ಮೇ 30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ, ಅವರ ವಿಚಾರಧಾರಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಸಾತ್ವಿಕ ವ್ಯಕ್ತಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಅವರದ್ದು ಕಳಂಕ ರಹಿತವಾದ ಹೋರಾಟದ ಬದುಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ.
ರವಿವಾರ ಭಾರತ ಯಾತ್ರಾ ಕೇಂದ್ರ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಗಾಂಧಿಪಾರ್ಕ್ ನಡಿಗೆದಾರರ ಕೂಟ, ಭಾರತ್ ನಗರ ಇವುಗಳ ಸಹಭಾಗಿತ್ವದಲ್ಲಿ ಆನ್‍ಲೈನ್ ಮೂಲಕ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್.ಎಸ್.ದೊರೆಸ್ವಾಮಿ ಅವರು ನಾಡುನುಡಿಯ ಜನಪರ ಚಿಂತಕರಾಗಿದ್ದರು ಎಂದು ತಿಳಿಸಿದರು.
ಚಿತ್ರಕಲಾ ಪರಿಷತ್‍ನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ದೊರೆಸ್ವಾಮಿಯವರು ಸ್ವಾರ್ಥ, ಕುಟುಂಬ ಹಾಗೂ ಭ್ರಷ್ಟ ರಾಜಕಾರಣವನ್ನು ಬಲವಾಗಿ ವಿರೋಧಿಸುತ್ತಿದ್ದರು. ನ್ಯಾಯ ಹಾಗೂ ಸತ್ಯದ ಪರವಾಗಿ ಸದಾ ಇರುತ್ತಿದ್ದರು ಎಂದು ಹೇಳಿದರು.
ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಮಾತನಾಡಿ, ಎಲ್ಲ ರಾಜಕೀಯ ಪಕ್ಷದಲ್ಲಿರುವವರಿಗೆ ದೊರೆಸ್ವಾಮಿ ಅವರ ಬಗ್ಗೆ ಗೌರವ ಮಿಶ್ರಿತ ಭಯವಿತ್ತು. ಆ ಮಹಾನ್ ಚೇತನರ ಹೋರಾಟವನ್ನು ನಾವು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ದೊರೆಸ್ವಾಮಿ ಅವರು ದಣಿವರಿಯದ ಹೋರಾಟಗಾರ. ಮೇಲ್ವರ್ಗದಲ್ಲಿ ಹುಟ್ಟಿದರೂ ದಮನಿತರ ಪರವಾಗಿ ಧ್ವನಿ ಎತ್ತುತ್ತಿದ್ದರು ಎಂದು ಹೇಳಿದರು.
ನಿರ್ದೇಶಕ ಬಿ.ಸುರೇಶ್ ಮಾತನಾಡಿ, ಮಂಡೂರಿನಲ್ಲಿ ತ್ಯಾಜ್ಯ ಸುರಿಯುತ್ತಿರುವುದರ ವಿರುದ್ಧ ಸ್ಥಳೀಯರು ಹೋರಾಟಕ್ಕಿಳಿಯುವಂತೆ ಮಾಡಿದವರು ದೊರೆಸ್ವಾಮಿ. ಅವರ ಕುರಿತು 500-600 ಪುಟದ ಸ್ಮರಣ ಗ್ರಂಥ ಹೊರತರಲು ಸಿದ್ಧತೆ ಆರಂಭವಾಗಿದೆ ಎಂದು ಹೇಳಿದರು. ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಮಾತನಾಡಿ, ದೊರೆಸ್ವಾಮಿ ಯಾರ ಎದುರೂ ಕೈಚಾಚಿದವರಲ್ಲ. ತಮ್ಮ ವರ್ಚಸ್ಸು ಉಪಯೋಗಿಸಿ ಮಕ್ಕಳಿಗೆ ಏನೂ ಮಾಡಲಿಲ್ಲ ಎಂದರು.
ದೊರೆಸ್ವಾಮಿ ಅವರ ಪುತ್ರ ರಾಜು ದೊರೆಸ್ವಾಮಿ ಮಾತನಾಡಿ, ಆಯಾ ದಿನ ಏನು ಸಿಗುತ್ತದೆಯೋ ಅದನ್ನು ತಿನ್ನಬೇಕು. ಹಣ ನಿನ್ನಪರಿಶ್ರಮದಿಂದ ಮಾತ್ರ ಬರಬೇಕು ಎಂದು ಅಪ್ಪ ಕಿವಿಮಾತು ಹೇಳುತ್ತಿದ್ದರು ಎಂದು ಸ್ಮರಿಸಿದರು.
ಸಾಣೇಹಳ್ಳಿಯ ತರಳಬಾಳು ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಮಾತನಾಡಿ, ದೊರೆಸ್ವಾಮಿ ಅಪರೂಪದ ಚೇತನ. ನಿಜವಾದ ಪ್ರಗತಿಪರ ಚಿಂತಕ. ಯಾರೇ ಒಳ್ಳೆಯ ಕೆಲಸ ಮಾಡಿದರೂ ಮೆಚ್ಚುವಂತಹ ಹೃದಯ ಶ್ರೀಮಂತಿಕೆ ಅವರಿಗಿತ್ತು ಎಂದು ನುಡಿದರು.
ಗಾಂಧಿಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕೆ.ವಿ.ನಾಗರಾಜಮೂರ್ತಿ, ಕೆ.ಎಸ್.ನಾಗರಾಜ್, ನಾಗೇಶ್ ಬೆಟ್ಟಕೋಟೆ ಉಪಸ್ಥಿತರಿದ್ದರು.
ನಿಜವಾದ ಅನಿಕೇತನ ಪ್ರಜ್ಞೆಯನ್ನು ದೊರೆಸ್ವಾಮಿ ಅವರಲ್ಲಿ ಕಂಡಿದ್ದೆ. ಬಡತನ ಮತ್ತು ಭ್ರಷ್ಟಾಚಾರ ಈ ದೇಶದ ಎರಡು ಶತ್ರುಗಳು ಎಂದು ಅವರು ಹೇಳುತ್ತಿದ್ದರು. ಅವರು ನೈತಿಕ ಶುದ್ಧತೆಯನ್ನು ಇಟ್ಟುಕೊಂಡು ಹೋರಾಟ ನಡೆಸಿದ ಜೀವ'
-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ







