ಲಾಕ್‍ಡೌನ್ ಅವಧಿಯಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ 'ಸಹಾಯ್' ತಂಡ
ಕರೆ ಮಾಡಿದರೆ ಮನೆ ಬಾಗಿಲಿಗೆ ಊಟ ತಲುಪಿಸುವ ತಂಡದ ಸದಸ್ಯರು

ಚಿಕ್ಕಮಗಳೂರು, ಮೇ 30: ಕೊರೋನ ಸೋಂಕಿನ ಭೀತಿಯಿಂದ ಜನ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಲಾಕ್‍ಡೌನ್‍ನಿಂದ ಒಪ್ಪೊತ್ತಿನ ಊಟಕ್ಕೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ದುಡಿಮೆಯೇ ಇಲ್ಲದೇ ಹಸಿವಿನಿಂದ ಹೈರಾಣಾಗಿದ್ದರೆ, ಮತ್ತೆ ಹಲವರು ಹೊಟೇಲ್‍ಗಳಿಲ್ಲದೇ ಹಸಿವಿನಿಂದ ಬಳಲುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೆಲ ಸಂಘಸಂಸ್ಥೆಗಳು ಬಡವರು, ನಿರ್ಗತಿಕರು ಸೇರಿದಂತೆ ಕೊರೋನ ಸೊಂಕಿತರು, ಭದ್ರತಾ ಸಿಬ್ಬಂದಿಯ ಹೊಟ್ಟೆ ತುಂಬಿಸುವಂತಹ ಕೆಲಸ ಮಾಡುತ್ತಿವೆ. ಹೀಗೆ ಹಸಿದವರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ನಗರದ 'ಸಹಾಯ್' ಎಂಬ ತಂಡವೊಂದು ಲಾಕ್‍ಡೌನ್ ಜಾರಿಯಾದಾಗಿನಿಂದ ಶ್ರಮಿಸುತ್ತಿದೆ.
ಕೊರೋನ ಎಂಬ ಮಾಹಾಮಾರಿ ಹಲವರಿಗೆ ಬದುಕಿನ ಪಾಠ ಕಲಿಸಿದ್ದರೇ, ಮತ್ತೆ ಕೆಲವರ ಬದುಕನ್ನು ಹೈರಾಣು ಮಾಡಿದೆ. ಇಂತಹ ಹೊತ್ತಿನಲ್ಲಿ ನಮ್ಮ ನಡುವಿನ ಹಲವರು ಮಾನವೀಯತೆಯ ಮೆರೆಯುತ್ತಿದ್ದಾರೆ. ಚಿಕ್ಕಮಗಳೂರು ನಗರದ ಸಹಾಯ್ ಎಂಬ ತಂಡವೊಂದು ಕಳೆದ 20 ದಿನಗಳಿಂದ ನಗರದಲ್ಲಿ ಲಾಕ್‍ಡೌನ್‍ನಿಂದ ಊಟ ತಿಂಡಿ ಸಿಗದೇ ಹಸಿವಿನಿಂದ ಬಳಲುವವರ ಪಾಲಿಗೆ ಆಶಾಕಿರಣವಾಗಿ ಮಾರ್ಪಟ್ಟಿದೆ. ಕೊರೋನ ಸೋಂಕಿನಿಂದ ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಿದ್ದವರು ಒಂದು ಕರೆ ಮಾಡಿದರೆ ಆ ಮನೆ ಬಾಗಿಲಿಗೆ ಉಚಿತವಾಗಿ ಊಟ ತಿಂಡಿ ತಲುಪಿಸುವ ಕೆಲಸವನ್ನು ಸಹಾಯ್ ತಂಡದ ಸದಸ್ಯರು ಮಾಡುತ್ತಿದ್ದಾರೆ. ಇದಲ್ಲದೇ ದುಡಿಮೆ ಇಲ್ಲದೇ ಮನೆಯಲ್ಲಿ ಊಟಕ್ಕೆ ಪರದಾಡುವವರಿಗೆ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ಆಸ್ಪತ್ರೆಯ ಮುಂಭಾಗ ಚಿಕಿತ್ಸೆಗೆ ಬಂದವರಿಗೆ ಸಹಾಯ್ ತಂಡ ಅವರಿರುವ ಜಾಗಕ್ಕೆ ಪ್ರತಿದಿನ ಮೂರು ಹೊತ್ತು ಊಟ ತಲುಪಿಸಿ ಸಹಾಯ ಮಾಡುತ್ತಿದೆ.
ಚಿಕ್ಕಮಗಳೂರಿನ ಉಪ್ಪಳ್ಳಿಯ ನಿವಾಸಿ ಅಬ್ದುಲ್ ಹಾಜಿ ನೇತೃತ್ವದ ಸಹಾಯ್ ತಂಡ ನಗರದಲ್ಲಿ ಲಾಕ್‍ಡೌನ್‍ನಿಂದಾಗಿ ಸಮಸ್ಯೆಗೆ ಸಿಲುಕಿ ಊಟಕ್ಕೆ ಪರದಾಡುವವರ ಹಸಿವು ನೀಗಿಸುತ್ತಿದೆ. ಉಪ್ಪಳ್ಳಿಯಲ್ಲೇ ಶುಚಿ-ರುಚಿಯಾದ ಅಡುಗೆ ತಯಾರಿಸಿ ನಗರ ಸೇರಿದಂತೆ ಅಕ್ಕ-ಪಕ್ಕದ ಹಳ್ಳಿಗಳಿಗೂ ಊಟ, ತಿಂಡಿಯನ್ನು ಈ ತಂಡ ರವಾನಿಸುತ್ತಿದೆ. ತಂಡದ ಸದಸ್ಯರು ಊಟ ತಿಂಡಿಗಾಗಿ ಕರೆ ಮಾಡಿದವರ ವಿಳಾಸ ಪಡೆದು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಹೋಗಿ ಊಟವನ್ನ ಕೊಟ್ಟು ಬರುತ್ತಾರೆ. ಬೆಳಗ್ಗೆ ತಿಂಡಿ ಬೇಕು ಎನ್ನುವವರು ರಾತ್ರಿ ಕರೆ ಮಾಡಿ ಬುಕ್ ಮಾಡಬೇಕು, ಮಧ್ಯಾಹ್ನದ ಊಟಕ್ಕೆ ಬೆಳಗ್ಗೆ, ರಾತ್ರಿ ಊಟಕ್ಕೆ ಮಧ್ಯಾಹ್ನ ದೂರವಾಣಿ ಕರೆ ಮಾಡಿ ಬುಕ್ ಮಾಡಿದರೆ ಸಾಕು ಸಹಾಯ್ ತಂಡ ಹಸಿದವರ ಮನೆ ಬಾಗಿಲಿಗೆ ಬಂದು ಉಚಿತವಾಗಿ ಆಹಾರದ ಪಾರ್ಸೆಲ್ ನೀಡುತ್ತಾರೆ. ಇನ್ನು ಈ ತಂಡ ಮಾಂಸಾಹಾರ ಬೇಕು ಎಂದು ಕರೆ ಮಾಡಿ ತಿಳಿಸಿದರೆ ಮಾಂಸಾಹಾರವನ್ನೂ ಕರೆ ಮಾಡಿದವರ ಮನೆಗೆ ತಲುಪಿಸುತ್ತಿದೆ. ಸಸ್ಯಾಹಾರ ಬೇಕೆನ್ನುವವರಿಗೆ ಸಸ್ಯಾಹಾರವನ್ನೇ ತಲುಪಿಸುತ್ತಿರುವುದು ವಿಶೇಷ.
ಊಟ, ತಿಂಡಿಯ ರುಚಿಯನ್ನ ಸವಿದ ಜನ ತಂಡದ ಸದಸ್ಯರಿಗೆ ಕರೆ, ಮೆಸೇಜ್ ಮಾಡಿ ಕೃತಜ್ಞತೆ ಸಲ್ಲಿಸುತ್ತಿದ್ದು, ತಂಡದ ಸದಸ್ಯರಲ್ಲಿ ಮತ್ತಷ್ಟು ಹುರುಪು ತರಿಸಿದೆ. ಯಾರೂ ಹಸಿವಿನಿಂದ ಪರದಾಟ ನಡೆಸಬಾರದು, ಊಟಕ್ಕೆ ಸಮಸ್ಯೆ ಆಗಬಾರದು ಎಂದು ಸಹಾಯ್ ತಂಡ ಎಲ್ಲೆಡೆ ಸಂಚರಿಸಿ ಜನರ ಹಸಿವಿನ ದಾಹವನ್ನ ನೀಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






.jpg)
.jpg)

