ಬ್ಲ್ಯಾಕ್ ಫಂಗಸ್‍ನಿಂದ ದೃಷ್ಠಿ ಕಳೆದುಕೊಳ್ಳುತ್ತಿರುವ ಅಪ್ರಾಪ್ತ ವಯಸ್ಕರು

ಬೆಂಗಳೂರು, ಮೇ 30: ರಾಜ್ಯದೆಲ್ಲೆಡೆ ದಿನೆ ದಿನೆ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಸೋಂಕು ಹೆಚ್ಚಾಗುತ್ತಿದ್ದು, ಸಣ್ಣ ವಯಸ್ಸಿನ ಬಾಲಕರು ಈ ಸೋಂಕಿಗೆ ಗುರಿಯಾಗಿ ಕಣ್ಣಿನ ದೃಷ್ಠಿ ಕಳೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಬಳ್ಳಾರಿ ಮೂಲದ 13 ವರ್ಷದ ಬಾಲಕಿಯಲ್ಲಿ ಇತ್ತೀಚಿಗೆ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿತ್ತು. ಆನಂತರ ಆಕೆಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಈ ನಡುವೆ ಮಧುಮೇಹ ರೋಗ ಕಾಣಿಸಿಕೊಂಡು ಕೋವಿಡ್ ಸೋಂಕು ದೃಢಪಟ್ಟಿತ್ತು. ಇದರಿಂದ, ಆಕೆ ದೃಷ್ಠಿ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಅದೇ ರೀತಿ, ಚಿತ್ರದುರ್ಗ ಮೂಲದ 11 ವರ್ಷ ವಯಸ್ಸಿನ ಬಾಲಕನಿಗೂ ಬ್ಲ್ಯಾಕ್ ಫಂಗಸ್ ಬಾಧಿಸಿದ್ದು, ಆತನ ದೃಷ್ಠಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದೀಗ ಕಣ್ಣು ಗುಡ್ಡೆ ತೆಗೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ತುತ್ತಾದ ಮಕ್ಕಳು ದಾಖಲಾಗುತ್ತಿದ್ದಾರೆ.







