ಲಸಿಕೆ ಮಾರಾಟ ಮಾಡಿ ಲಂಚ ಪಡೆಯುವ ದಯನೀಯ ಸ್ಥಿತಿಗೆ ನಾನು ಹೋಗಿಲ್ಲ: ಶಾಸಕ ರವಿಸುಬ್ರಮಣ್ಯ

ಬೆಂಗಳೂರು, ಮೇ 30: `ನಿನ್ನೆ ನಡೆದ ಎ.ವಿ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಘಟನೆಯ ಹಿಂದೆ ಕೆಲವು ದುಷ್ಕರ್ಮಿಗಳು ಮತ್ತು ಕಾಂಗ್ರೆಸ್ ಪಕ್ಷದ ಕೆಲ ಮುಖಂಡರ ಕೈವಾಡ ಇರುವುದು ನಿಜಕ್ಕೂ ಬೇಸರದ ಸಂಗತಿ. ಇಡೀ ದೇಶವೇ ಕೊರೋನ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಇಂಥ ಆಧಾರ ರಹಿತ ಆರೋಪ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡುವ ಬದಲು ಇನ್ನು ಮುಂದಾದರು ರಾಜ್ಯದ ಒಳಿತಿಗಾಗಿ ಕೆಲಸ ಮಾಡುವುದರ ಕಡೆ ಗಮನ ಹರಿಸಿ' ಎಂದು ಬಿಜೆಪಿ ಶಾಸಕ ರವಿಸುಬ್ರಮಣ್ಯ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ಈ ಸಂಬಂಧ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋವೊಂದನ್ನು ಶೇರ್ ಮಾಡಿರುವ ಅವರು, 'ನಿನ್ನೆ ನಡೆದ ಈ ನಿರಾಧಾರ ಆಪಾದನೆಯನ್ನು ಖಂಡಿಸಿ ಸಾವಿರಾರು ಜನರು ಸಾಮಾಜಿಕ ಜಾಲತಾಣ ಮತ್ತು ಬಹಿರಂಗವಾಗಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆಲ್ಲರಿಗೂ ಈ ಮುಖಾಂತರ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿನ್ನೆ ನಡೆದ ಘಟನೆ ಸಂಪೂರ್ಣ ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದೆ' ಎಂದು ದೂರಿದ್ದಾರೆ.
'ನನ್ನ ವಿರುದ್ಧ ಕಾಂಗ್ರೆಸ್ ದೂರು ನೀಡಿರುವುದು ಸಂತೋಷ, ದೂರು ನೀಡಿದ್ದು, ಒಳ್ಳೆಯದೆ ಆಯಿತು. ಸತ್ಯ ಹೊರಬರಲಿ. ದೂರಿನಿಂದ ನಾನು ಯಾವುದೇ ಸಂದರ್ಭದಲ್ಲಿಯೂ ಹತಾಶನಾಗುವುದಿಲ್ಲ. ವಿಚಲಿತವೂ ಆಗುವುದಿಲ್ಲ. ಕೋವಿಡ್ ವ್ಯಾಕ್ಸಿನ್ ಮಾರಾಟ ಮಾಡಿ ಸಂಕಷ್ಟದಲ್ಲಿರುವ ಜನರಿಂದ ಲಂಚ ಸ್ವೀಕಾರ ಮಾಡುವಷ್ಟು ದಯನೀಯ ಸ್ಥಿತಿಗೆ ನಾನು ಎಂದಿಗೂ ಹೋಗುವುದಿಲ್ಲ. ನನ್ನ ವಿರುದ್ಧ ರಾಜಕೀಯ ಕಾರಣಕ್ಕೆ ಕೆಲವರು ಪಿತೂರಿ ಮಾಡಿದ್ದಾರೆ. ಆದರೆ, ನಾನೇನು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ' ಎಂದು ಅವರು ತಿಳಿಸಿದ್ದಾರೆ.







