ಜೂನ್ ನಲ್ಲಿ ರಾಜ್ಯಗಳು, ಕೇಂದ್ರಾಡಳಿತಗಳಿಗೆ 12 ಕೋಟಿ ಲಸಿಕೆ ಲಭ್ಯ: ಕೇಂದ್ರ

ಹೊಸದಿಲ್ಲಿ, ಮೇ 30: ಕೋವಿಡ್-19 ಲಸಿಕೆಗಳ ಕೊರತೆಯ ಬಗ್ಗೆ ಹಲವು ರಾಜ್ಯ ಗಳು ದೂರುತ್ತಿರುವಂತೆಯೇ,ದೇಶದಲ್ಲಿ ಜೂನ್ ವೇಳೆಗೆ ಸುಮಾರು 12 ಕೋಟಿ ಡೋಸ್ ಗಳು ಲಭ್ಯವಿರುವುದಾಗಿ ಕೇಂದ್ರ ಗೃಹ ಸಚಿವಾಲಯ ರವಿವಾರ ತಿಳಿಸಿದೆ.
ಈ 6 ಕೋಟಿ ಡೋಸ್ ಗಳನ್ನು ಕೇಂದ್ರ ಸರಕಾರವು ರಾಜ್ಯಗಳು ಹಾಗೂ ಕೇಂದ್ರಾ ಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಿದೆ. ಇನ್ನೂ 5.8 ಕೋಟಿ ಡೋಸ್ ಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಾವಾಗಿಯೇ ಖರೀದಿಸಲು ಲಭ್ಯವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಮೇ ತಿಂಗಳಲ್ಲಿ 7.94 ಕೋಟಿ ಕೋವಿಡ್-19 ಲಸಿಕೆಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಿಗೆ ಪೂರೈಕೆಯಾಗಿರುವುದಾಗಿ ಅದು ಹೇಳಿದೆ.
‘‘ಜೂನ್ ತಿಂಗಳಲ್ಲಿ ಕೋವಿಡ್ ಲಸಿಕೆಗಳ 6.09 ಕೋಟಿ ಡೋಸ್ ಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಪಾಲನಾ ಕಾರ್ಯಕರ್ತರು (ಎಚ್ ಸಿ ಡಬ್ಲು), ಮುಂಚೂಣಿ ಕಾರ್ಯಕರ್ತರು (ಎಫ್ ಎಲ್ ಡಬ್ಲು) ಹಾಗೂ 45 ವರ್ಷ ಹಾಗೂ ಅದಕ್ಕಿಂತ ಅಧಿಕ ವಯೋಮಾನದ ವರಿಗೆ ಭಾರತ ಸರಕಾರವು ಉಚಿತವಾಗಿ ಪೂರೈಕೆ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
‘‘ಇದರ ಜೊತೆಗೆ, 5.86 ಕೋಟಿಗೂ ಅಧಿಕ ಡೋಸ್ ಗಳು ರಾಜ್ಯ, ಕೇಂದ್ರಾಡಳಿತಗಳು ಹಾಗೂ ಖಾಸಗಿ ಆಸ್ಪತ್ರೆಗಳ ನೇರ ಖರೀದಿಗೆ ಲಭ್ಯವಾಗಲಿವೆ. ಹೀಗಾಗಿ 2021ರ ಜೂನ್ ವೇಳೆಗೆ ಸುಮಾರು 12 ಕೋಟಿ ಡೋಸ್ ಗಳು ರಾಷ್ಟ್ರೀಯ ಕೋವಿಡ್ ಲಸಿಕೀಕರಣ ಕಾರ್ಯಕ್ರಮಕ್ಕೆ ಲಭ್ಯವಾಗಲಿವೆಯೆಂದು ಅದು ಸಚಿವಾಲಯ ತಿಳಿಸಿದೆ.
ಲಸಿಕೆ ಖರೀದಿಯ ನಮೂನೆ, ಜನಸಂಖ್ಯೆ ಹಾಗೂ ಲಸಿಕೆ ಪೋಲಾಗಿರುವ ಆಧಾರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಿಗೆ ಲಸಿಕೆಗಳನ್ನು ಹಂಚಿಕೆ ಮಾಡಲಾಗವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ಲಸಿಕೆಗಳ ಪೂರೈಕೆ ವೇಳಾಪಟ್ಟಿಯನ್ನು ರಾಜ್ಯಗಳಿಗೆ ಮುಂಚಿತವಾಗಿಯೇ ಒದಗಿಸಲಾಗುವುದು ಎಂದು ಸಚಿವಾಲಯ ಹೇಳಿದೆ.
ರಾಜ್ಯಗಳು ತಮಗೆ ವಿತರಿಸಲಾದ ಡೋಸ್ ಗಳನ್ನು ತಾರ್ಕಿಕವಾಗಿ ಹಾಗೂ ವಿವೇಚನೆಯಿಂದ ಬಳಸಬೇಕು ಹಾಗೂ ಆ ಮೂಲಕ ಲಸಿಕೆ ಪೋಲಾಗುವುದನ್ನು ಕನಿಷ್ಠಗೊಳಿಸಬೇಕೆಂದು ಅದು ಕರೆ ನೀಡಿದೆ.
ಮೇ ತಿಂಗಳಲ್ಲಿ 4,03,49,830 ಲಸಿಕೆಗಳ ಡೋಸ್ ಗಳನ್ನು ಕೇಂದ್ರ ಸರಕಾರವು ರಾಜ್ಯಗಳಿಗೆ ಪೂರೈಕೆ ಮಾಡಿದೆ. ಇದರ ಜೊತೆಗೆ 3,90,55,370 ಡೋಸ್ ಗಳನ್ನು ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳು ನೇರ ಖರೀದಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.