ಮಿಲಿಟರಿ ಮೈತ್ರಿಕೂಟವಾಗುವ ಉದ್ದೇಶ್ ಖ್ವಾಡ್ ಗೆ ಇಲ್ಲ: ನರವಾಣೆ

ಹೊಸದಿಲ್ಲಿ, ಮೇ 30: ಭಾರತ, ಜಪಾನ್, ಆಸ್ಟ್ರೇಲಿಯ ಹಾಗೂ ಅಮೆರಿಕ ದೇಶಗಳನ್ನೊಳಗೊಂಡ ಖ್ವಾಡ್ ಮೈತ್ರಿಕೂಟವನ್ನು ಮಿಲಿಟರಿ ಒಕ್ಕೂಟವೆಂಬುದಾಗಿ ಕೆಲವು ರಾಷ್ಟ್ರಗಳು ಬಿಂಬಿಸುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲವೆಂದು ಸೇನಾ ವರಿಷ್ಠ ಎಂ.ಎಂ.ನರವಾಣೆ ತಿಳಿಸಿದ್ದಾರೆ.
‘‘ಖ್ವಾಡ್ ಗೆ ಮಿಲಿಟರಿ ಮೈತ್ರಿಕೂಟವಾಗುವ ಉದ್ದೇಶವಿಲ್ಲ ಹಾಗೂ ಹಾಗಾಗಲು ಪ್ರಯತ್ನಿಸುವುದು ಕೂಡಾ ಇಲ್ಲ. ಇದೊಂದು ಇಂಡೋ-ಪೆಸಿಫಿಕ್ ಪ್ರಾಂತಕ್ಕೆ ಸಂಬಂಧಿಸಿದ ಗಮನಹರಿಸುವ ಬಹುಪಕ್ಷೀಯ ಒಕ್ಕೂಟವಾಗಿದೆ ಎಂದು ನರವಾಣೆ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಖ್ವಾಡ್ ಮೈತ್ರಿಕೂಟ ಕುರಿತು ಚೀನಾ ಹಾಗೂ ರಶ್ಯ ಆತಂಕ ವ್ಯಕ್ತಪಡಿಸಿರುವ ನಡುವೆಯೇ ನರವಾಣೆ ಈ ಹೇಳಿಕೆ ನೀಡಿದ್ದಾರೆ. ಇಂಡೊ ಪೆಸಿಫಿಕ್ ಸಾಗರಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಆತಂಕಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಖ್ವಾಡ್ ಮೈತ್ರಿಕೂಟ ರಚನೆಯಾಗಿದೆ ಎನ್ನಲಾಗಿದೆ.
ಕೆಲವು ದೇಶಗಳು ಆಧಾರರಹಿತ ಭೀತಿಯನ್ನು ಸೃಷ್ಟಿಸುವುದಕ್ಕಾಗಿ ಖ್ವಾಡ್ ಒಂದು ಸೇನಾ ಮೈತ್ರಿಕೂಟವೆಂದು ಬಿಂಬಿಸುತ್ತಿವೆ. ಆದರೆ ಅವುಗಳ ಬಳಿಕ ಅದನ್ನು ಸಾಬೀತುಪಡಿಸುವಂತಹ ಯಾವುದೇ ದೃಢವಾದ ಸಾಕ್ಷಗಳಿಲ್ಲವೆಂದು ನರವಾಣೆ ತಿಳಿಸಿದ್ದಾರೆ.
ಖ್ವಾಡ್ ನ ಕಟು ಟೀಕಾಕಾರನಾಗಿರುವ ಚೀನಾವು, ಈ ಮೈತ್ರಿಕೂಟವು ಇಂಡೋ ಪೆಸಿಫಿಕ್ ಪ್ರಾಂತದಲ್ಲಿ ತನ್ನನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸುತ್ತಾ ಬಂದಿದೆ.
ಖ್ವಾಡ್ ಮೈತ್ರಿಕೂಟವನ್ನು ರಶ್ಯ ಕೂಡಾ ವಿರೋಧಿಸುತ್ತಿದ್ದು, ಇದರಿಂದಾಗಿ ಇಂಡೋ-ಪೆಸಿಫಿಕ್ ಪ್ರಾಂತದಲಿ ಶಾಂತಿ ಹಾಗೂ ಸ್ಥಿರತೆಯನ್ನು ಸ್ಥಾಪಿಸಲು ನಡೆಯುತ್ತಿರುವ ಮಾತುಕತೆಗಳಿಗೆ ಅಡ್ಡಿಯುಂಟಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.ಮಿಲಿಟರಿ ಮೈತ್ರಿಕೂಟವಾಗುವ ಉದ್ದೇಶ್ ಖ್ವಾಡ್ ಗೆ ಇಲ್ಲ: ನರವಾಣೆ (ನೋಶೇರ್)







