ಜನರ ಮೇಲೆ ಲಸಿಕೆಗಳ ಪರಿಣಾಮದ ಬಗ್ಗೆ ಅಧ್ಯಯನಕ್ಕಾಗಿ ಆರ್‌ಎಂಆರ್‌ಸಿ ಗೆ ಒಡಿಶಾ ಆಗ್ರಹ

ಭುವನೇಶ್ವರ, ಮೇ 30: ಎರಡು ಡೋಸ್ ಗಳ ಲಸಿಕೀಕರಣದ ಬಳಿಕವೂ ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಜನರ ಮೇಲೆ ಲಸಿಕೆಗಳ ಪರಿಣಾಮದ ಬಗ್ಗೆ ಅಧ್ಯಯನವನ್ನು ನಡೆಸಬೇಕೆಂದು ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRC)ವನ್ನು ಆಗ್ರಹಿಸಿದೆ. ‘‘
ಲಸಿಕೀಕರಣದ ಬಳಿಕ ಕೋವಿಡ್-19 ಸೋಂಕಿತರಾದವರು ಆಸ್ಪತ್ರೆಗೆ ದಾಖಲಾಗಿರುವುದು ಹಾಗೂ ಅವರಲ್ಲಿನ ರೋಗ ತೀವ್ರತೆಯನ್ನು, ಲಸಿಕೆ ಹಾಕಿಸಿಕೊಳ್ಳದ ಕೋವಿಡ್-19 ಸೋಂಕಿತರೊಂದಿಗೆ ಹೋಲಿಕೆ ಮಾಡಿ, ಅಧ್ಯಯನ ನಡೆಸುವಂತೆ ಕೋರಿ ಒಡಿಶಾದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಮೊಹಪಾತ್ರ ಅವರು ಭುವನೇಶ್ವರದ ಆರ್ಎಂಆರ್ಸಿ ನಿರ್ದೇಕ ಡಾ. ಸಂಘಮಿತ್ರಾ ಪಾತಿ ಅವರಿಗೆ ಮನವಿ ಮಾಡಿ ದ್ದಾರೆ.
ಆರ್ಎಂಆರ್ಸಿಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಘಟಕವಾಗಿದೆ.
ಈ ಕುರಿತ ಅಧ್ಯಯನವು ರಾಜ್ಯದಲ್ಲಿ ಭವಿಷ್ಯದ ಲಸಿಕೀಕರಣ ಮಾರ್ಗನಕ್ಷೆಯನ್ನು ರೂಪಿಸುವ ನಿಟ್ಟಿನಲ್ಲಿ ಅಮೂಲ್ಯವಾದ ಮಾಹಿತಿಗಳನ್ನು ಒದಗಿಸಿಕೊಡಲಿದೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಲಸಿಕೆಯು ಜನರನ್ನು ಸೋಂಕಿನಿಂದ ರಕ್ಷಿಸುತ್ತದೆ ಮಾತ್ರವಲ್ಲದೆ ರೋಗವು ತೀವ್ರ ರೂಪಪಡೆಯುವುದನ್ನು ತಡೆಗಟ್ಟುತ್ತದೆ ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ ಎಂದು ಪ್ರತಿಪಾದಿಸುವ ಮೂಲಕ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಸರಕಾರವು ಜನತೆಯನ್ನು ಆಗ್ರಹಿಸುತ್ತಿದೆ ಎಂದು ಪಿ.ಕೆ. ಮೊಹಪಾತ್ರ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ಲಸಿಕೀಕರಣ ಅಭಿಯಾನವು ಜನವರಿ 16ರಂದು ಆರಂಭಗೊಂಡಾಗಿನಿಂದ ಮೊದಲ್ಗೊಂಡು ಮೇ 29ರವರೆಗೆ 76,05,646 ಡೋಸ್ ಗಳನ್ನು ಒಡಿಶಾದ ಜನತೆಗೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ಪೈಕಿ 65.3 ಲಕ್ಷ ಕೋವಿಶೀಲ್ಡ್ ಹಾಗೂ 7.5 ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳಾಗಿವೆ.







