ಭಟ್ಕಳದಲ್ಲಿ ಸೋಮವಾರದಿಂದ ಖರೀದಿಗೆ ಹೆಚ್ಚು ಸಮಯ ಅವಕಾಶ : ಸಹಾಯಕ ಆಯುಕ್ತೆ
ಭಟ್ಕಳ: ಸೋಮವಾರದಿಂದ ಗುರುವಾರದ ತನಕ ಅಗತ್ಯ ವಸ್ತುಗಳ ಖರೀದಿಗೆ ಸ್ವಲ್ಪ ಹೆಚ್ಚು ಅವಕಾಶ ಕೊಟ್ಟಿದ್ದು ಇದು ಯಾವುದೇ ರೀತಿಯ ಸಡಿಲಿಕೆಯಲ್ಲ, ಜನರು ಯಾವುದೇ ಜನಜಂಗುಳಿಯಾಗದಂತೆ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಹೇಳಿದರು.
ಅವರು ರವಿವಾರ ಸಂಜೆ ಮಿನಿ ವಿಧಾನ ಸೌಧದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನಲ್ಲಿ ಸೋಮವಾರದಿಂದ ಗುರುವಾರದ ತನಕ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 12 ಗಂಟೆಯ ತನಕ ಅವಕಾಶವಿದ್ದು, ಜನರು ಗುಂಪು ಸೇರಬಾರದು. ಅಗತ್ಯ ವಸ್ತುಗಳನ್ನು ಖರೀದಿ ಸುವವರು ಒಂದೇ ಬಾರಿಗೆ ಬಂದು ಖರೀದಿ ಮಾಡಿ ಮನೆಗೆ ಹೋಗಬೇಕು, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು ಎಂದರು.
ಜನದಟ್ಟಣೆ ಜಾಸ್ತಿಯಾಗುತ್ತಿರುವುದರಿಂದ ಸೂಪರ್ ಮಾರುಕಟ್ಟೆಗಳನ್ನು ತೆರೆಯಲು ಅವಕಾಶವಿಲ್ಲ ಎಂದ ಅವರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಸಹ ಅವಕಾಶವಿಲ್ಲ, ರಸ್ತೆ ಬದಿ ವ್ಯಾಪಾರಿಗಳು ಅಂತರ ಕಾಯ್ದು ಕೊಂಡು ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಎಲ್ಲಾ ಬ್ಯಾಂಕುಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಲಾ ಗಿದ್ದು ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 12 ಗಂಟೆಯ ತನಕ ಕಾರ್ಯಾಚರಿಸಲಿವೆ. ಯಾವುದೇ ಬ್ಯಾಂಕಿಂಗ್ ಕೆಲಸವಿದ್ದರೆ ಬೆಳಗ್ಗೆ 8 ಗಂಟೆಯಿಂದ 12 ಗಂಟೆಯ ಒಳಗಾಗಿ ಮುಗಿಸಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ 28 ಪ್ರದೇಶಗಳನ್ನು ಗುರುತಿಸಿ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅಲ್ಲಿಂದ ಯಾರೂ ಹೊರಗೆ ಹೋಗುವಂತಿಲ್ಲ, ಅವರಿಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೆ ಪೂರೈಸಲು ವ್ಯವಸ್ಥೆ ಮಡಲಾಗಿದ್ದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ 17, ಪುರಸಭೆ ವ್ಯಾಪ್ತಿಯಲ್ಲಿ 4, ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6 ಹಾಗೂ ಶಿರಾಲಿ ವಿಶೇಷ ಕಂಟೈನ್‍ಮೆಂಟ್ ಜೋನ್ ಎಂದೂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ ಎಸ್. ರವಿಚಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ದೇವರಾಜ, ಹಿರಿಯ ಆರೋಗ್ಯಾಧಿಕಾರಿ ಸುಜಯಾ ಸೋಮನ್ ಮುಂತಾದವರಿದ್ದರು.







